ಉಚಿತ ಉಡುಗೊರೆಗಳ ಕುರಿತು ಸುಪ್ರೀಂನಲ್ಲಿ ಗಂಭೀರ ಚರ್ಚೆ

Social Share

ನವದೆಹಲಿ, ಜು.26- ಉಚಿತ ಕೊಡುಗೆಗಳ ಮೂಲಕ ಮತದಾರರ ದಾರಿ ತಪ್ಪಿಸುವ ರಾಜಕೀಯ ಪಕ್ಷಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವಕೀಲರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂಕೋರ್ಟ್‍ನಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದ್ದಲ್ಲದೆ, ಬೆಕ್ಕಿಗೆ ಗಂಟೆ ಕಟ್ಟೋರ್ಯಾರು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಚುನಾವಣಾ ಆಯೋಗದ ಪರ ವಕೀಲ ಅಮಿತ್ ಶರ್ಮಾ ಬೇರೆ ನ್ಯಾಯಾಲಯದಲ್ಲಿದ್ದರು. ಅವರಿಗೆ ಬರಲು ಪೀಠ ಆಹ್ವಾನ ನೀಡಿತು.

ಈ ವೇಳೆ ಅಶ್ವಿನಿ ಉಪಾಧ್ಯಾಯ ಅವರು ಆಯೋಗ ತಾನು ಇದನ್ನೆಲ್ಲಾ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ ಎಂದಾಗ, ಮುಖ್ಯನ್ಯಾಯಮೂರ್ತಿಗಳು ಆ ರೀತಿ ಎಲ್ಲಿ ಹೇಳಿಕೆ ನೀಡಿದೆ ಎಂದು ಪ್ರಶ್ನಿಸಿದರು. ಆಯೋಗದ ಪರ ವಕೀಲರು ಬರುವವರೆಗೂ ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ವಿಚಾರಣಾ ಪೀಠಕ್ಕೆ ಆಗಮಿಸಿದ ಅಮಿತ್ ಶರ್ಮಾ ಅವರು, ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡಬಹುದಾಗಿದೆ. ಇದೇ ನ್ಯಾಯಾಲಯ ಆ ರೀತಿಯ ಕಾನೂನುಗಳಿಗೆ ಸಮ್ಮತಿ ನೀಡಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಮತದಾರರನ್ನು ಸೆಳೆಯುವ ಹುಡುಗೊರೆ ಮತ್ತು ಲಂಚಗಳಿಗೆ ಅವಕಾಶ ಇದೆ ಎಂದಾದರೆ. ಚುನಾವಣಾ ಆಯೋಗದ ಅಸ್ಥಿತ್ವದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಶರ್ಮಾ ಅವರು, ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸೂಕ್ತ ಕಾನೂನು ತರಲು ಅವಕಾಶವಿದೆ ಎಂದಾಗ ಮಧ್ಯ ಪ್ರವೇಶಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಇದು ಚುನಾವಣಾ ವ್ಯಾಪ್ತಿಗೆ ಒಳಪಡುವ ವಿಚಾರ. ನಾವೊಬ್ಬರೇ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದರು.

ಇದನ್ನು ಕೇಂದ್ರ ಸರ್ಕಾರದ ಹೇಳಿಕೆ ಎಂದು ದಾಖಲಿಸಬಹುದೇ. ಈ ವಿಷಯದಲ್ಲಿ ನೀವು ಗಂಭೀರವಾಗಿದ್ದೀರಾ. ಕೇಂದ್ರ ಸರ್ಕಾರ ಈ ಕುರಿತಂತೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಏಕೆ ಹಿಂಜರಿಯುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.
ತಾವು ಪ್ರತ್ಯೇಕ ಪ್ರಮಾಣ ಪತ್ರ ಸಲ್ಲಿಸುವುದಾಗಿ ನಟರಾಜ್ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಇದು ಗಂಭೀರವಾದ ವಿಚಾರ. ನ್ಯಾಯಾಲಯ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದಾಗ, ಉಡುಗೊರೆಗಳಿಗೆ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ನಿಮ್ಮ ಸಲಹೆ ಏನು ಎಂದು ನ್ಯಾಯಮೂರ್ತಿಗಳು ಅರ್ಜಿದಾರರನ್ನು ಪ್ರಶ್ನಿಸಿದರು.

ನಾವು ಕಾನೂನು ಆಯೋಗದ ವರದಿಯನ್ನು ನೋಡಬೇಕಿದೆ. ಚುನಾವಣಾ ಆಯೋಗದ ಅಭಿಪ್ರಾಯವನ್ನು ಒಪ್ಪಲು ಸಾಧ್ಯವಿಲ್ಲ. ರಾಷ್ಟ್ರೀಯ ಹಾಗೂ ರಾಜ್ಯ ಪಕ್ಷಗಳು ಈ ರೀತಿಯ ಆಮಿಷಗಳನ್ನು ನೀಡಲು ಅವಕಾಶವಿರಬಾರದು. ಪಂಜಾಬ್‍ನಲ್ಲಿ 3 ಕೋಟಿ ಜನಸಂಖ್ಯೆ ಇದೆ. 3 ಲಕ್ಷ ಕೊಟಿ ಸಾಲ ಇದೆ. ಪ್ರತಿಯೊಬ್ಬ ಪಂಜಾಬಿಯ ತಲೆ ಮೇಲೆ ಒಂದು ಕೋಟಿ ಸಾಲ ಇದೆ. ಈ ರೀತಿಯ ಉಚಿತ ಉಡುಗೊರೆಯಿಂದ ಬೊಕ್ಕಸಕ್ಕೆ ಹಾನಿಯಾಗುತ್ತಿದೆ.

ನಾವು ಶ್ರೀಲಂಕದ ಪರಿಸ್ಥಿತಿಯನ್ನು ಗಮನಿಸಿದ್ದೇವೆ. ಬಹುತೇಕ ಭಾರತವೂ ಅದೇ ಹಾದಿಯಲ್ಲಿದೆ. ದೇಶ 70 ಲಕ್ಷ ಕೋಟಿ ಸಾಲ ಮಾಡಿದೆ. ಚುನಾವಣಾ ಆಯೋಗ ಇದಕ್ಕಾಗಿ ಪ್ರತ್ಯೇಕ ಕಾನೂನು ತರಬೇಕು. ಜನಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಯಾಗಬೇಕು. ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಣಾಳಿಕೆಯಲ್ಲಿ ತಾವು ಮಾಡುವ ಸಾಲಗಳ ಬಗ್ಗೆ ರಾಜಕೀಯ ಪಕ್ಷಗಳ ಸ್ಪಷ್ಟ ಅಭಿಪ್ರಾಯ ತಿಳಿಸಬೇಕೆಂದು ಒತ್ತಾಯಿಸಿದರು.

ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಿ ಈ ಪ್ರವೃತಿಯನ್ನು ನಿಯಂತ್ರಿಸಬೇಕು ಎಂದು ಹೇಳುವುದು ಸರಿ. ಆದರೆ, ಹೇಗೆ ನಿಯಂತ್ರಿಸುವುದು. ಸುಪ್ರೀಂಕೋರ್ಟ್ ಯಾವ ರೀತಿ ಆದೇಶ ನೀಡಲು ಸಾಧ್ಯ. ತಮಿಳುನಾಡು ಪ್ರಕರಣದಲ್ಲಿ ಆಗಿರುವುದೇನು ? ಸುಳ್ಳು ಭರವಸೆಗಳಿಂದ ಪಂಜಾಬ್ ಒಂದೇ ಅಲ್ಲ. ಇಡೀ ದೇಶವೇ ಸಾಲದ ಸುಳಿಗೆ ಸಿಲುಕಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಏನನ್ನಾದರೂ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

Articles You Might Like

Share This Article