ಬೆಂಗಳೂರು,ಫೆ.21- ಬಿಬಿಎಂಪಿ ಚುನಾವಣೆಗೆ ಮತ್ತೆ ವಿಘ್ನ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಸುಪ್ರೀಂಕೋರ್ಟ್ ಆದೇಶ ನೀಡಿದರೂ ಚುನಾವಣೆ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.ಬಿಜೆಪಿ ಶಾಸಕರ ಕುತಂತ್ರಕ್ಕೆ ಬಿಬಿಎಂಪಿ ಚುನಾವಣೆ ಸದ್ಯಕ್ಕೆ ನಡೆಯುವ ಲಕ್ಷಣಗಳು ಕಂಡುಬರುತ್ತಿಲ್ಲ. ಸುಪ್ರೀಂಕೋರ್ಟ್ನಲ್ಲಿ ಈಗಾಗಲೇ ಚುನಾವಣಾ ಅರ್ಜಿ ವಿಚಾರಣೆ ಹಂತದಲ್ಲಿದೆ.
ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಆದೇಶ ನೀಡಿದರೂ ಚುನಾವಣೆ ನಡೆಸಲು ಅಡಚಣೆಯಾಗುವ ಸಾಧ್ಯತೆಯಿದೆ. ಕಾರಣವೆಂದರೆ ಇಂದೇ ಬೆಂಗಳೂರಿನ ಆಸುಪಾಸಿನ ಕೆಲವು ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವುದಾಗಿ ವಾರ್ಡ್ ವಿಂಗಡಣೆಗೆ ಸರ್ಕಾರ ಕೈ ಹಾಕಿತ್ತು.
ಆದರೆ ಈಗ ಹಳ್ಳಿಗಳನ್ನು ಸೇರಿಸದೆ ವಾರ್ಡ್ಗಳನ್ನು ವಿಂಗಡಣೆ ಮಾಡಿದೆ. ಇದರಿಂದ ಬೆಂಗಳೂರಿನ ಆಸುಪಾಸಿನಲ್ಲಿರುವ ಸುಮಾರು 50 ಹಳ್ಳಿಗಳು ಅತ್ತ ಗ್ರಾಪಂ ವ್ಯಾಪ್ತಿಗೂ ಸೇರದೆ ಇತ್ತ ಬಿಬಿಎಂಪಿ ವ್ಯಾಪ್ತಿಗೂ ಸೇರದೆ ಅತಂತ್ರ ಪರಿಸ್ಥಿತಿ ತಲುಪಿವೆ.
ಜನಪ್ರತಿನಿಗಳಿಲ್ಲದೆ ತ್ರಿಶಂಕು ಪರಿಸ್ಥಿತಿಯಾಗಲಿದೆ. ಈಗಿರುವ 198 ವಾರ್ಡ್ಗಳನ್ನೇ 243 ವಾರ್ಡ್ಗಳನ್ನಾಗಿ ವಿಂಗಡಣೆ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಹಳ್ಳಿಗಳಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯೇ ನಡೆದಿಲ್ಲ. ಇತ್ತ ಗ್ರಾಪಂ ಚುನಾವಣೆಯೂ ಇಲ್ಲ, ಅತ್ತ ಬಿಬಿಂಪಿ ಚುನಾವಣೆಯೂ ಇಲ್ಲದೆ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಮಾಜಿ ಜನಪ್ರತಿನಿಗಳು ಮತ್ತೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ.
ಬೆಂಗಳೂರು ಹೊರವಲಯದ ಒಂದು ಪುರಸಭೆ, ಒಂದು ನಗರಸಭೆ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳು ಈಗ ಅತಂತ್ರವಾಗಲಿವೆ. ಚಿಕ್ಕಬಾಣವಾರ, ಹುಣಸೇಮಾರನಹಳ್ಳಿ, ಯಲಹಂಕ, ಕಗ್ಗಲಿಪುರ, ಮಹದೇವಪುರ, ಯಶವಂತಪುರ, ದಾಸರಹಳ್ಳಿ ಕ್ಷೇತ್ರದ ಆಸುಪಾಸಿನ ಈ ಹಳ್ಳಿಗಳು ಅತಂತ್ರವಾಗಲಿವೆ. ಚುನಾವಣಾ ಆಯೋಗ ಚುನಾವಣೆಗೆ ಸಿದ್ದವಿದ್ದರೂ ಈ ಪರಿಸ್ಥಿತಿಯಿಂದ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
