BIG NEWS : ಪೆಗಾಸಸ್ ಬೇಹುಗಾರಿಕೆ ಪ್ರಕರಣದ ತನಿಖಾ ವರದಿ ಸುಪ್ರೀಂಗೆ ಸಲ್ಲಿಕೆ

Social Share

ನವದೆಹಲಿ,ಆ.25- ಕಳೆದ ವರ್ಷ ಭಾರೀ ಸಂಚಲನ ಮೂಡಿಸಿದ್ದ ಪೆಗಾಸಸ್(ಬೇಹುಗಾರಿಕೆ) ಪ್ರಕರಣದ ತನಿಖೆ ನಡೆಸಿದ ನ್ಯಾಯಮೂರ್ತಿ ರವೀಂದ್ರನ್ ಅವರ ಸಮಿತಿ, ಸುಪ್ರೀಂಕೋರ್ಟ್‍ಗೆ ವರದಿ ನೀಡಿದ್ದು, ಐದು ಫೋನ್‍ಗಳಲ್ಲಿ ಸಂಶಯಾಸ್ಪದ ಗೂಡಾಚಾರಿಕೆ ನಡೆದಿರುವುದು ಕಂಡುಬಂದಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಇಸ್ರೇಲ್ ಮೂಲದ ಕಂಪೆನಿಯಿಂದ ಸೇನಾ ಗೂಡಾಚಾರಿಕೆಗೆ ಬಳಸುವ ಪೆಗಾಸಸ್ ಸಾಫ್ಟ್‍ವೇರ್‍ನನ್ನು ಖರೀದಿಸಿ ಅದನ್ನು ಪ್ರತಿ ಪಕ್ಷಗಳ ನಾಯಕರು, ನ್ಯಾಯಾಂಗದ ಅಧಿಕಾರಿಗಳು, ವಕೀಲರು, ಸಮಾಜಿಕ ಕಾರ್ಯಕರ್ತರು, ಪತ್ರಕರ್ತರು ಸೇರಿದಂತೆ ಇತರೆ ಪ್ರಮುಖರ ಮೇಲೆ ಬೇಹುಗಾರಿಕೆಗೆ ಬಳಕೆ ಮಾಡಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು.

ಇದನ್ನು ಪ್ರಶ್ನಿಸಿದ ಪ್ರತಿಪಕ್ಷಗಳು, ಕಳೆದ ವರ್ಷದ ಅಂತ್ಯದಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಭಾರೀ ಗದ್ದಲ ಮಾಡಿದ್ದವು. ಪ್ರೆಸ್‍ಗಿಲ್ಡ್ ಸೇರಿದಂತೆ ಕೆಲವರು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ವಿಭಾಗೀಯ ಪೀಠ, ಆರೋಪದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ರವೀಂದ್ರನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಗೆ ತಾಂತ್ರಿಕ ಸಲಹೆ ನೀಡಲು ಪರಿಣಿತರನ್ನು ನಿಯೋಜಿಸಲಾಗಿದ್ದು, ಸುದೀರ್ಘ ತನಿಖೆ ನಡೆಸಿದ ಸಮಿತಿ ಸುಪ್ರೀಂಕೋರ್ಟ್‍ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಿದೆ.

ಮೂಲಗಳ ಪ್ರಕಾರ ಐದು ಫೋನ್‍ಗಳಲ್ಲಿ ಪೆಗಾಸಸ್ ಸಾಫ್ಟ್‍ವೇರ್‍ನಿಂದ ನಡೆಸಿದ ಬೇಹುಗಾರಿಕೆ ಪತ್ತೆಯಾಗಿದೆ ಎನ್ನಲಾಗಿದೆ. ಸಮಿತಿ ಏಕಾಏಕಿ ವರದಿ ನೀಡದೆ ಸುದೀರ್ಘವಾಗಿ ಪರಿಶೀಲನೆ ನಡೆಸಿದೆ. 29 ಹಂತಗಳಲ್ಲಿ ತಾಂತ್ರಿಕ ಅಂಶಗಳನ್ನು ಅಧ್ಯಯನ ನಡೆಸಲಾಗಿದೆ. ಕೊನೆಗೆ ಮೂರು ಭಾಗಗಳಾಗಿ ನ್ಯಾಯಾಲಯಕ್ಕೆ ವರದಿ ನೀಡಿದ್ದು, ನಾಗರಿಕರ ಖಾಸಗಿತನವನ್ನು ರಕ್ಷಿಸಿಡುವುದು ಕಾನೂನಿನ ಆದ್ಯ ಕರ್ತವ್ಯ ಎಂದು ಶಿಫಾರಸು ಮಾಡುವುದಾಗಿ ತಿಳಿದು ಬಂದಿದೆ.

ಕೇಂದ್ರ ಸರ್ಕಾರ ತನಿಖೆಗೆ ಯಾವುದೇ ರೀತಿಯ ಸಹಕಾರ ನೀಡಿಲ್ಲ ಎಂದು ಆಕ್ಷೇಪಿಸಿರುವುದಾಗಿಯೂ ಹೇಳಲಾಗಿದೆ. ವರದಿಯನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವುದು ಮತ್ತು ವಾದಿ-ಪ್ರತಿವಾದಿಗಳಿಗೆ ನೀಡುವ ಬಗ್ಗೆ ಪರಿಶೀಲಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ನಾಳೆ ನಿವೃತ್ತರಾಗುತ್ತಿದ್ದು, ಇಂದು ವರದಿ ಸಲ್ಲಿಕೆಯಾಗಿದೆ.

Articles You Might Like

Share This Article