ಮುಂಬೈ ಸರಣಿ ಸ್ಪೋಟದ ಆರೋಪಿ ಅಬು ಸಲೇಂ ಬಿಡುಗಡೆಗೆ ಸುಪ್ರೀಂ ಸಲಹೆ

Social Share

ನವದೆಹಲಿ, ಜು.11- ಮುಂಬೈ ಸ್ಪೋಟದ ಆರೋಪಿ ಹಾಗೂ ಗ್ಯಾಂಗ್‍ಸ್ಟರ್ ಅಬು ಸಲೇಂ ಹಸ್ತಾಂತರಿಸಲು ಪೋರ್ಚುಗಲ್ ಸರ್ಕಾರಕ್ಕೆ 2002ರಲ್ಲಿ ನೀಡಿರುವ ಭರವಸೆಯಂತೆ 25 ವರ್ಷ ಜೈಲು ವಾಸದ ಬಳಿಕ ಭಾರತ ಆರೋಪಿಯನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.

ಪೋರ್ಚುಗಲ್‍ಗೆ ನೀಡಿರುವ ಬದ್ಧತೆಯನ್ನು ಗೌರವಿಸಲು ಭಾರತ ನಿಗದಿತ ಕಾಲಮಿತಿಯಲ್ಲಿ ಪ್ರಕ್ರಿಯೆಯನ್ನು ಆರಂಭಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. 1993ರ ಮುಂಬೈ ಸ್ಪೋಟ ಪ್ರಕರಣದಲಿ ್ಲ 257 ಮಂದಿ ಸಾವನ್ನಪ್ಪಿದ್ದು, 713 ಮಂದಿ ಗಾಯಗೊಂಡಿದ್ದರು.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಬುಸಲೀಂಗೆ 2017ರ ಜೂನ್‍ನಲ್ಲಿ 25 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮೊದಲು ಮುಂಬೈನ ಟಾಡಾ ನ್ಯಾಯಾಲಯ ಮುಂಬೈ ಮೂಲದ ಬಿಲ್ಡರ್ ಪ್ರದೀಪ್ ಜೈನ್ ಮತ್ತು ಆತನ ಚಾಲಕ ಮೆಹಂದಿ ಹಸ್ಸನ್ ಕೊಲೆ ಆರೋಪಕ್ಕಾಗಿ ಆರೋಪಿ ಅಬು ಸಲೀಂಗೆ ಜೀವಾವ ಶಿಕ್ಷೆ ವಿಧಿಸಿ 2015ರ ಫೆಬ್ರವರಿ 25ರಂದು ಆದೇಶಿಸಿದೆ.

ಮುಂಬೈ ಸ್ಪೋಟ ಪ್ರಕರಣದ ಬಳಿಕ ದೇಶ ಬಿಟ್ಟು ಪರಾರಿಯಾಗಿದ್ದ ಅಬುಸಲಿಂ ಪೋರ್ಚುಗಲ್‍ನಲ್ಲಿ ಪೌರತ್ವ ಪಡೆದು ನೆಲೆಸಿದ್ದ. ಆತನನ್ನು ವಶಕ್ಕೆ ಪಡೆಯಲು ಭಾರತ ಸರ್ಕಾರ ಸುದೀರ್ಘ ಕಾನೂನು ಹೋರಾಟ ನಡೆಸಿತ್ತು. ಅಂತಿಮವಾಗಿ ಆಗಿನ ಉಪ ಪ್ರಧಾನಿ ಹಾಗೂ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರು ಪೋರ್ಚುಗಲ್ ಸರ್ಕಾರಕ್ಕೆ ಭರವಸೆ ನೀಡಿ, 25 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಅಬುಸಲೀಂಗೆ ವಿಧಿಸಲಾಗುವುದಿಲ್ಲ ಎಂದು ಹೇಳಿದ್ದರು. ಅದರ ಅನುಸಾರ 2002ರಲ್ಲಿ ಆರೋಪಿಯ ಭಾರತಕ್ಕೆ ಹಸ್ತಾಂತರವಾಗಿತ್ತು.

ಆ ಒಪ್ಪಂದವನ್ನು ಜಾರಿಗೊಳಿಸಲು ಆರೋಪಿ ಅಬು ಸಲೀಂ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಆತನ ಪರವಾಗಿ ಹಿರಿಯ ವಕೀಲ ರಿಶಿ ಮಲ್ಹೋತ್ರಾ ವಾದಿಸಿದ್ದಾರೆ. ಕೇಂದ್ರ ಸರ್ಕಾರ ಪೋರ್ಚುಗಲ್‍ಗೆ ನೀಡಿರುವ ಭರವಸೆಯನ್ನು ಈಡೇರಿಸಬೇಕು.

ಈಗಾಗಲೇ ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡಿರುವುದರಿಂದ ಅಬುಸಲಿಂನನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಎಂ.ಸುಂದರೇಶ್ ಅವರನ್ನು ಒಳಗೊಂಡ ಪೀಠ, ಭಾರತ ತನ್ನ ಭರವಸೆಗೆ ಬದ್ಧವಾಗಿರುವಂತೆ ಸಲಹೆ ನೀಡಿದೆ.

ರಾಷ್ಟ್ರಪತಿ ಅವರು ಸಂವಿಧಾನದ ಪರಿಚ್ಛೇಧ 72ರ ಅನುಸಾರ ತಮ್ಮ ಅಧಿಕಾರವನ್ನು ಚಲಾಯಿಸಿ, ದೇಶ ನೀಡಿರುವ ಭರವಸೆಯನ್ನು ಪಾಲಿಸಬೇಕು ಎಂದಿದ್ದಾರೆ. ಸರ್ಕಾರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು, ಕೇಂದ್ರ ಸರ್ಕಾರ ತನ್ನ ಭರವಸೆಯನ್ನು ಉಳಿಸಿಕೊಳ್ಳುವ ಸಾರ್ವಭೌಮತೆಯನ್ನು ಕಾಪಾಡಿಕೊಂಡಿದೆ. ಅದನ್ನು ಸೂಕ್ತ ಕಾಲದಲ್ಲಿ ಜಾರಿ ಗೊಳಿಸಲಿದೆ. ನ್ಯಾಯಾಲಯದ ಬಲವಂತದಿಂದ ಭಾರತ ತನ್ನ ಭರವಸೆಯನ್ನು ಈಡೇರಿಸುವ ಒತ್ತಡ ಸರಿಯಲ್ಲ ಎಂದಿದ್ದಾರೆ.

Articles You Might Like

Share This Article