ನವದೆಹಲಿ,ಜು.18- ಭ್ರಷ್ಟಾಚಾರ ನಿಗ್ರಹದಳ(ಎಸಿಬಿ) ವಿರುದ್ಧ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ಎಲ್ಲ ನಿರ್ದೇಶನಗಳಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಆರೋಪಿಗೆ ಸಂಬಂಧವಿರಲಾರದ ವಿಚಾರಣೆಗಳನ್ನು ಹೈಕೋರ್ಟ್ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್‍ಗೆ ನಾವು ಸೂಚನೆ ನೀಡುತ್ತೇವೆ. ಮೂರು ವಾರಗಳ ನಂತರ ವಿಚಾರಣೆ ನಡೆಸುತ್ತೇವೆ. ಇದರ ವಿಚಾರಣೆ ಪಟ್ಟಿ ಮಾಡಿ ಎಂದು ಸುಪ್ರೀಂಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ಪೀಠ ಆರೋಪಿಯ ಜಾಮಿನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಾೀಧಿಶರು ಮಾಡಿರುವ ಅಪ್ರಸ್ತುತ ಅವಲೋಕನಗಳನ್ನು ಮಾಡಿದ್ದಾರೆ ಎಂದು ಹೇಳಿದರು.
ಎಡಿಜಿಪಿ ಸೀಮಂತ್‍ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಹೈಕೋರ್ಟ್ ಪೀಠ ನೀಡಿರುವ ಪ್ರತಿ ಹೇಳಿಕೆಗಳನ್ನು ಅನೂರ್ಜಿತಗೊಳಿಸುವಂತೆ ಮನವಿ ಮಾಡಿದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿ ಹೈಕೋರ್ಟ್‍ನಿಂದ ತೀವ್ರ ಟೀಕೆಗೆ ಗುರಿಯಾಗಿರುವ ಐಎಎಸ್ ಅಧಿಕಾರಿ ಮಂಜುನಾಥ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್.ನಾಗ ಮತ್ತು ಈ ಪ್ರಕರಣದ ವಿಚಾರಣೆಯನ್ನು ಬೇರೆ ಪೀಠಕ್ಕೆ ನಿಯೋಜಿಸಬೇಕೆಂದು ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲಿಲ್ಲ.