ಪಿ.ವರವರ ರಾವ್‍ಗೆ ಮಧ್ಯಂತರ ಜಾಮೀನು ಮುಂದುವರಿಕೆ

Social Share

ನವದೆಹಲಿ, ಜು.19- ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಪಿ.ವರವರ ರಾವ್ ಅವರು ವೈದ್ಯಕೀಯ ಕಾರಣಗಳಿಗಾಗಿ ನಿಯಮಿತ ಜಾಮೀನು ಕೋರಿ ಸಲ್ಲಿಸಿರುವ ಮನವಿಯ ಮೇರೆಗೆ ಸುಪ್ರಿಂ ಕೋರ್ಟ್ ಮಂಗಳವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‍ಐಎ) ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ಮುಂದಿನ ವಿಚಾರಣೆಗೆ ಆಗಸ್ಟ್ 10ಕ್ಕೆ ಸಮಯ ನಿಗದಿ ಮಾಡಿದೆ. ಪ್ರಸ್ತುತ ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನಿನ ಮೇಲಿರುವ ಅವರು ಜುಲೈ 12 ರಂದು ಶರಣಾಗಬೇಕಿತ್ತು. ಸುಪ್ರಿಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

83 ವರ್ಷದ ವರವರ ರಾವ್ ಅವರು ಸಲ್ಲಿಸಿದ್ದ ಶಾಶ್ವತ ವೈದ್ಯಕೀಯ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು, ಅದನ್ನು ಸುಪ್ರಿಂಕೋರ್ಟ್‍ನಲ್ಲಿ ಪ್ರಶ್ನಿಸಲಾಗಿದೆ.

2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ವರವರ ರಾವ್ ಮಾಡಿದ ಭಾಷಣ ಪ್ರಚೋದನಾಕಾರಿಯಾಗಿತ್ತು. ಮರುದಿನ ಮಹಾರಾಷ್ಟ್ರ ದ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ಆರೋಪಿಸಿ ಪೊಲೀಸರು ವರವರರಾವ್‍ರನ್ನು ಬಂಧಿಸಿದ್ದರು.

ಮಾವೋವಾದಿ ನಂಟು ಹೊಂದಿರುವವರು ಈ ಸಮಾವೇಶವನ್ನು ಆಯೋಜಿಸಿದ್ದರು ಎಂದು ಪುಣೆ ಪೊಲೀಸರು ಹೇಳಿದ್ದರು. ನಂತರ ತನಿಖೆಯನ್ನು ಎನ್‍ಐಎ ವಹಿಸಲಾಗಿತ್ತು.

Articles You Might Like

Share This Article