ಸುಪ್ರೀಂ ತೀರ್ಪು ಸ್ವಾಗತಾರ್ಹ : ಅರಗ ಜ್ಞಾನೇಂದ್ರ

Social Share

ಬೆಂಗಳೂರು,ಅ.13- ಶಿಕ್ಷಣ ಸಂಸ್ಥೆ ಗಳಲ್ಲಿ ಹಿಜಾಬ್ ಧರಿಸುವ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸರ್ಕಾರ ಸ್ವಾಗತಿಸಲಿದ್ದು, ರಾಜ್ಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಏನೇ ತೀರ್ಪು ಕೊಟ್ಟರು ಸರ್ಕಾರ ಆದೇಶಕ್ಕೆ ತಲೆಬಾಗುತ್ತದೆ ವಿಭಿನ್ನ ತೀರ್ಪು ನೀಡಿರುವುದರಿಂದ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಯಾಗಲಿದೆ. ಅಂತಿಮ ತೀರ್ಪು ಬರುವರೆಗೂ ನಾವು ಕಾಯೋಣ ಎಂದು ತಿಳಿಸಿದರು.

ಹೈಕೋರ್ಟ್ ಸೇರಿದಂತೆ ಸುಪ್ರೀಂಕೋರ್ಟ್‍ವರೆಗೂ ಹಿಜಾಬ್ ವಿಚಾರದಲ್ಲಿ ನೀಡಿರುವ ಪ್ರತಿಯೊಂದು ಆದೇಶವನ್ನು ಯಥಾವತ್ತಾಗಿ ಪಾಲನೆ ಮಾಡಿದೆ. ಮುಂದೆಯೂ ಕೂಡ ಏನೇ ತೀರ್ಪು ಬಂದರೂ ಅನುಷ್ಠಾನ ಮಾಡುತ್ತೇವೆ ಎಂದರು.

ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದು ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.

ಕಾನೂನು ಸುವ್ಯವಸ್ಥೆ ಕುರಿತಂತೆ ಹಿರಿಯ ಅಕಾರಿಗಳ ಜೊತೆ ಮೊದಲೇ ಸಭೆ ನಡೆಸಲಾಗಿತ್ತು. ನ್ಯಾಯಾಲಯದ ತೀರ್ಪಿನ ಕುರಿತು ಪರ, ವಿರೋಧವಾಗಿ ವ್ಯಾಖ್ಯಾನಿಸುವ ಅಗತ್ಯವಿಲ್ಲ. ವಿಸ್ತೃತ ಪೀಠದಲ್ಲಿ ಅಂತಿಮ ತೀರ್ಪು ಬರುವವರೆಗೂ ಯಥಾಸ್ಥಿತಿ ಮುಂದುವರೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಜಾಬ್‍ಗಿಂತ ಶಿಕ್ಷಣ ಮುಖ್ಯ ಎಂಬುದನ್ನು ಎಲ್ಲರೂ ಅರಿಯಬೇಕು. ವಿದ್ಯಾರ್ಥಿಗಳು ಪ್ರತಿಷ್ಠೆಗೆ ಬೀಳದೆ ಶಿಕ್ಷಣ ಮುಂದುವರೆಸಬೇಕು ನಿಮ್ಮ ಭವಿಷ್ಯವನ್ನು ನೀವು ರೂಪಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಿತ ದೃಷ್ಟಿಯಿಂದ, ಕರ್ನಾಟಕ ಸರ್ಕಾರ ಶಾಲೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಈ ಬಗ್ಗೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತೀರ್ಪಿನ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.

Articles You Might Like

Share This Article