ವಿದ್ಯಾರ್ಥಿನಿಗೆ ಮನೆಕಟ್ಟಿಸಿಕೊಟ್ಟ ಶಿಕ್ಷಕರನ್ನು ಅಭಿನಂದಿಸಿದ ಸಚಿವ ಸುರೇಶ್ಕುಮಾರ್
ಬೆಂಗಳೂರು, ನ.2- ನಿವೃತ್ತಿಯಿಂದ ಬಂದ ಆರ್ಥಿಕ ನೆರವಿನಲ್ಲಿ ತಮ್ಮ ವಿದ್ಯಾರ್ಥಿನಿಗೆ ಮನೆ ಕಟ್ಟಿಸಿಕೊಟ್ಟು ಆಕೆಯ ಉನ್ನತ ವ್ಯಾಸಂಗಕ್ಕೂ ಸಹಾಯ ಮಾಡಲು ಮುಂದಾಗಿರುವ ಮುಖ್ಯೋಪಾಧ್ಯಯರನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ಕುಮಾರ್ ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸುರೇಶ್ಕುಮಾರ್ ಅವರು, ಮುರಳಿ ಕಡೇಕರ್ರೊಂದಿಗೆ ಮಾತನಾಡಿ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ.
ಅತ್ಯಂತ ನಿರ್ಲಿಪ್ತ ಭಾವನೆಯಿಂದ ಅವರು ನನ್ನ ಧನ್ಯವಾದಗಳನ್ನು ಸ್ವೀಕರಿಸಿದ್ದು ಒಂದು ವಿಶೇಷವೇ! ಮುರುಳಿ ಕಡೇಕರ್ ಉಡುಪಿಯ ಸರಕಾರಿ ಅನುದಾನಿತ ನಿಟ್ಟೂರು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಮೊನ್ನೆ ನಿವೃತ್ತಿ ಹೊಂದಿದರು. ನಿವೃತ್ತಿ ಆಗಿರುವ ಈ ಶಿಕ್ಷಕ ಅವರ ಶಾಲೆಯ ಒಂಬತ್ತನೇ ತರಗತಿಯ ಬಾಲಕಿ ನಯನಳ ಕುಟುಂಬ ವಾಸವಾಗಿದ್ದ ಮನೆಯ ಪರಿಸ್ಥಿತಿ ಗಮನಿಸಿ ತನ್ನ ಸ್ವಂತ ಹಣದಿಂದ ಒಂದು ಒಳ್ಳೆಯ ಮನೆಯನ್ನು ಕಟ್ಟಿಸಿಕೊಟ್ಟು ಕೃತಾರ್ಥರಾಗಿದ್ದಾರೆ.
ಇಷ್ಟೇ ಅಲ್ಲದೆ ನಯನಾಳ ಉನ್ನತ ಶಿಕ್ಷಣಕ್ಕೂ ಆರ್ಥಿಕ ಸಹಾಯ ಮಾಡುವೆನೆಂದು ನಿರ್ಧರಿಸಿದ್ದಾರೆ. ಇಂತಹ ಶಿಕ್ಷಕರೇ ಸಮಾಜದ ನಿಜವಾದ ಶಕ್ತಿ. ಮುರಳಿ ಕಡೆಕಾರ್ ಅವರ ಈ ಪ್ರವೃತ್ತಿ ಮುಂದುವರಿಯಲು ಅವರಿಗೆ ಅಗತ್ಯ ಚೈತನ್ಯ ಭಗವಂತ ನೀಡಲಿ ಎಂದು ಹೇಳಿದ್ದಾರೆ.