“ಖಾಸಗಿ ಶಾಲೆಗಗಳು SSLC ಪರೀಕ್ಷಾ ಪ್ರವೇಶ ಪತ್ರ ನೀಡಲು ನಿರಾಕರಿಸುವಂತಿಲ್ಲ”

ಟಿ.ದಾಸರಹಳ್ಳಿ,ಜು.17- ಶಾಲಾ ಶುಲ್ಕ ಪಾವತಿಸದಿದ್ದರೂ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತಪ್ಪದೆ ವಿದ್ಯಾರ್ಥಿಗಳಿಗೆ ನೀಡುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.

ಕ್ಷೇತ್ರದ ಕಾಳಹಸ್ತಿನಗರದ ಸರ್ಕಾರಿ ಪ್ರೌಶಾಲೆಯಲ್ಲಿ ಇದೇ 19 ಹಾಗೂ 22 ರಂದು ನಡೆಯಲಿರುವ ಪರೀಕ್ಷಾ ಸಿದ್ದತೆಯನ್ನು ಪರಿಶೀಲಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲೂ ಪ್ರವೇಶ ಪತ್ರ ಸಮಸ್ಯೆ ಆಗಿಲ್ಲ. ಒಂದೊಮ್ಮೆ ವಿದ್ಯಾರ್ಥಿಗಳಿಗೆ ಶಾಲೆಗಳು ಪ್ರವೇಶ ಪತ್ರ ನೀಡಲು ನಿರಾಕರಿಸಿದರೆ ಬಿಇಒ ಸಂಪರ್ಕಿಸಿ ಎಂದು ಹೇಳಿದರು.
50 ಸಾವಿರ ಮಕ್ಕಳಿಗೆ ಪ್ರವೇಶ ಪತ್ರ ಸಿಕ್ಕಿಲ್ಲ ಎಂಬುದು ತಪ್ಪು ಲೆಕ್ಕ.

ಈ ಬಾರಿ ಒಎಂಆರ್ ಶೀಟ್ ಮೂಲಕ ಪರೀಕ್ಷೆ ನಡೆಸಲಾಗುವುದು ಇದರಲ್ಲಿ ಪರೀಕ್ಷಾರ್ತಿಗಳ ಪ್ರವೇಶ ಪತ್ರ ಸಂಖ್ಯೆ ಹಾಗೂ ಫೋಟೊ ಇರಲಿದೆ. ಸಾರಿಗೆ ಸೇರಿ ಯಾವುದೇ ಕಾರಣದಿಂದಲೂ ಮಕ್ಕಳು ಪರೀಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಡಿಸಿ ಹಾಗೂ ಡಿಡಿಪಿಐ ಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕಳೆದ ವರ್ಷ ಆರು ದಿನಗಳ ಕಾಲ ಪರೀಕ್ಷೆ ನಡೆಸಲಾಗಿತ್ತು. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ 2 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಪರೀಕ್ಷೆಯನ್ನು ಸುರಕ್ಷತೆಯಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಲಸಿಕೆ ಹಾಕಿಸಿಕೊಂಡಿರುವ ಸಿಬ್ಬಂದಿಯನ್ನೆ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಸ್ಥಳೀಯ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಿವೆ ಎಂದು ಹೇಳಿದರು.