ಸರ್ಜಿಕಲ್ ಸ್ಟ್ರೈಕ್ ಮಾಡಿದ ಕಮ್ಯಾಂಡೋಗಳ ಪರಾಕ್ರಮಕ್ಕೆ ದೇಶ ಮೆಚ್ಚುಗೆ

Surgical-Strike--01
ನವದೆಹಲಿ, ಸೆ.29 (ಪಿಟಿಐ)- ಭಾರತ-ಪಾಕಿಸ್ತಾನ ನಡುವೆ ಇರುವ ಗಡಿಯುದ್ದಕ್ಕೂ ಬೀಡುಬಿಟ್ಟಿದ್ದ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ಮಿಂಚಿನ ದಾಳಿ ನಡೆಸಿ 50ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿ ಪಾಕ್‍ಗೆ ಮರ್ಮಾಘಾತ ನೀಡಿ ಇಂದಿಗೆ ಎರಡು ವರ್ಷ.

ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನಿ ಕೃಪಾಪೋಷಿತ ತ ಉಗ್ರರು ದಾಳಿ ನಡೆಸಿ 19 ಯೋಧರ ಮಾರಣಹೋಮ ನಡೆಸಿದ್ದಕ್ಕೆ ಪ್ರತೀಕಾರವಾಗಿ 2016ರ ಸೆ.28ರಂದು ಮಧ್ಯರಾತ್ರಿ ಕಾರ್ಯಾಚರಣೆಗೆ ಇಳಿದ ಕಮ್ಯಾಂಡೋಗಳು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿದ್ದ ಉಗ್ರರ ಶಿಬಿರಗಳನ್ನು ನುಚ್ಚುನೂರು ಮಾಡಿ ಹಲವು ಭಯೋತ್ಪಾದಕರನ್ನು ಸದೆ ಬಡಿದರು.

ಸೆ.29ರ ನಸುಕಿನ ಮುನ್ನವೇ ಕಮ್ಯಾಂಡೋಗಳು ಉಗ್ರರ 7 ಶಿಬಿರಗಳನ್ನು ಧ್ವಂಸಗೊಳಿಸಿದರು. ಈ ಸೀಮಿತ ದಾಳಿಯಲ್ಲಿ 50ಕ್ಕೂ ಹೆಚ್ಚು ಭಯೋತ್ಪಾದಕರು ಹತರಾದರು. ಉಗ್ರಗಾಮಿಗಳ ಬಳಿ ಇದ್ದ ಶಸ್ತ್ರಾಸ್ತ್ರಗಳು ಮದ್ದುಗುಂಡುಗಳನ್ನು ಯೋಧರು ನಿರ್ನಾಮ ಮಾಡಿದರು. ಅತ್ಯಂತ ಗೌಪ್ಯವಾಗಿ ಮತ್ತು ವ್ಯವಸ್ಥಿತವಾಗಿ ನಡೆದ ಭಾರತೀಯ ಕಮ್ಯಾಂಡೋಗಳ ಮಿಂಚಿನ ದಾಳಿ ಮತ್ತು ಶಕ್ತಿ-ಸಾಮಥ್ರ್ಯಕ್ಕೆ ಇಡೀ ವಿಶ್ವವೇ ನಿಬ್ಬೆರಗಾಯಿತು.

ಸರ್ಜಿಕಲ್ ಸ್ಟ್ರೈಕ್ ದ್ವಿತೀಯ ವರ್ಷಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ನಿನ್ನೆ ರಾಜಸ್ತಾನದ ಜೋಧ್‍ಪುರ್‍ನಲ್ಲಿ ಪರಾಕ್ರಮ್ ಪರ್ವ್ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ. ರಾಜಧಾನಿ ದೆಹಲಿ ಸೇರಿದಂತೆ ಭಾರತದಾದ್ಯಂತ ಇದು ಸರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷಾಚರಣೆ ಪ್ರಯುಕ್ತ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಯೋಧರ ಪರಾಕ್ರಮವನ್ನು ಗುಣಗಾನ ಮಾಡಲಾಗುತ್ತಿದೆ.

Sri Raghav

Admin