ನವದೆಹಲಿ, ಆ.26 – ಗುಜರಾತ್ ಸೇರಿದಂತೆ ಎಂಟು ರಾಜ್ಯಗಳು ಹಾಗೂ ಹಲವು ಕೇಂದ್ರಾಡಳಿತ ಪ್ರದೇಶಗಳನ್ನು ಕಾಡಿರುವ ಜಾನುವಾರುಗಳ ಚರ್ಮದ ಕಾಯಿಲೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲೂ ಪತ್ತೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಲುಂಪಿ ಚರ್ಮದ ಕಾಯಿಲೆ ವಿವಿಧ ರಾಜ್ಯಗಳಲ್ಲಿ ಸುಮಾರು 7,300ಜಾನುವಾರುಗಳ ಸಾವಿಗೆ ಕಾರಣವಾಗಿದೆ.
2019ರಲ್ಲಿ ಕಾಣಿಸಿಕೊಂಡಿದ್ದ ಈ ಸೋಂಕು ಒಂದಷ್ಟು ದಿನ ನಿಷ್ಕ್ರೀಯಗೊಂಡಿತ್ತು. ಕಳೆದ ಎರಡು ತಿಂಗಳಿನಿಂದ ದಿಢೀರ್ ಹೆಚ್ಚಾಗಿದೆ. ಈ ಸೋಂಕಿನಿಂದ ಪಂಜಾಬ್ನಲ್ಲಿ 3,359, ರಾಜಸ್ತಾನದಲ್ಲಿ 2111, ಗುಜರಾತ್ನಲ್ಲಿ 1,679, ಜಮ್ಮು ಮತ್ತು ಕಾಶ್ಮೀರದಲ್ಲಿ 62, ಹಿಮಾಚಲ ಪ್ರದೇಶದಲ್ಲಿ 38, ಉತ್ತರಾಖಂಡ್ನಲ್ಲಿ 36, ಅಂಡಮಾನ್ ನಿಕೋಬಾರ್ನಲ್ಲಿ 29 ಹಸುಗಳು ಸಾವನ್ನಪ್ಪಿವೆ.
ಮಹಾರಾಷ್ಟ್ರದಲ್ಲೂ ಈ ಸೋಂಕು ಕಾಣಿಸಿಕೊಂಡಿತ್ತು. ಕರ್ನಾಟಕದ ಗಡಿ ಭಾಗದಲ್ಲಿರುವ ಪುಣೆ ಜಿಲ್ಲೆಯ ಜುನಾರ್ ತಹಸೀಲ್ನ ಮಂದವೇ ಗ್ರಾಮದಲ್ಲಿ ಎಂಟು ಶಂಕಿತ ಲುಂಪಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ರೋಗ ತನಿಖಾ ವಿಭಾಗದ ತಂಡ ಮಾಂಡವೆ ಗ್ರಾಮಕ್ಕೆ ಭೇಟಿ ನೀಡಿ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಿದೆ ಎಂದು ಪುಣೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಯುಷ್ ಪ್ರಸಾದ್ ತಿಳಿಸಿದ್ದಾರೆ.
ಗ್ರಾಮದಲ್ಲಿ ಏಳು ಹೋರಿಗಳು ಮತ್ತು ಒಂದು ಹಸುವಿಗೆ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಈವರೆಗೂ ಯಾವುದೇ ಜಾನುವಾರುಗಳ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಈಗಾಗಲೆ ಮಾಂಸ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಜಾನುವಾರುಗಳ ಸಾಗಾಣಿಕೆ ತಡೆಗಟ್ಟುವಿಕೆ ಕ್ರಮಕೈಗೊಳ್ಳಲಾಗಿದೆ. ಅಸ್ವಸ್ಥ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಲುಂಪಿ ಚರ್ಮದ ಕಾಯಿಲೆ ಮಾರಣಾಂತಿಕವಾಗಿದ್ದು, ಹೈನೋದ್ಯಮದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಈಗಾಗಲೇ ಸೋಂಕು ಬಾಸಿರುವ ರಾಜ್ಯಗಳಲ್ಲಿ ಹಾಲು ಉತ್ಪಾದನೆ ಕುಂಠಿತವಾಗಿದೆ. ಸೋಂಕಿತ ಹಸುಗಳು ಜ್ವರ, ಮೂಗು ಸೋರುವಿಕೆ, ನಿತ್ರಾಣತೆಯನ್ನು ಅನುಭವಿಸುತ್ತವೆ. ಈ ಸೋಂಕು ಸಾವಿಗೂ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಸೋಂಕಿನ ನಿಯಂತ್ರಣಕ್ಕೆ ಲಸಿಕೆ ಅಭಿವೃದ್ಧಿ ಪಡಿಸಲಾಗಿದೆ. ಕಡಿಮೆ ವೆಚ್ಚದ ಲಸಿಕೆಯನ್ನು ಎಲ್ಲ ಜಾನುವಾರಿಗಳಿಗೂ ಕೊಡಿಸುವಂತೆ ಐಸಿಎಆರ್ ತಿಳಿಸಿದೆ. ಪ್ರತಿ ತಿಂಗಳು 2.5 ಲಕ್ಷ ಡೊಸೇಜ್ ಲಸಿಕೆಗಳನ್ನು ಉತ್ಪಾದಿಸಲಾಗುತ್ತಿದೆ. ಸೋಂಕು ವೇಗವಾಗಿ ಹರಡುವುದರಿಂದ ನಿಯಂತ್ರಣ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಸಲಹೆ ನೀಡಲಾಗಿದೆ.
ರಸ್ತೆ ಬದಿಯಲ್ಲಿ ಜಾನುವಾರುಗಳು ಸಂಶಯಾಸ್ಪದವಾಗಿ ಮೃತಪಟ್ಟಿದ್ದರೆ, ತಕ್ಷಣ ಮುನ್ನೆಚ್ಚರಿಕೆ ವಹಿಸಬೇಕು. ಜಾನುವಾರುಗಳು ಸಂಪರ್ಕಕ್ಕೆ ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.