ಬೆಂಗಳೂರು, ಜು.27- ಶಂಕಿತ ಉಗ್ರ ಅಖ್ತರ್ ಹುಸೇನ್ ಬಾಂಗ್ಲಾದೇಶ, ಪಾಕಿಸ್ತಾನ, ಆಪ್ಘಾನಿಸ್ತಾನ ದೇಶಗಳು ಹಾಗೂ ಕಾಶ್ಮೀರದ ವ್ಯಕ್ತಿಗಳ ಜೊತೆ ಸಂಪರ್ಕದಲ್ಲಿದ್ದ ಎಂಬುವುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈತನ ಮೊಬೈಲ್‍ನ್ನು ಪರಿಶೀಲಿಸಿದಾಗ ಕೆಲವು ಸೋಟಕ ಮಾಹಿತಿಗಳು ಲಭ್ಯವಾಗಿದ್ದು , ಐದಾರು ಗ್ರೂಪ್‍ಗಳನ್ನು ಮಾಡಿಕೊಂಡು ಒಂದೊಂದು ಗ್ರೂಪ್‍ನಲ್ಲಿ 20 ರಿಂದ 25 ಮಂದಿ ಸೇರ್ಪಡೆ ಮಾಡಿ ಅವರುಗಳ ಸಂಪರ್ಕದಲ್ಲಿದ್ದುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಶಂಕಿತ ಉಗ್ರ ಅಖ್ತರ್‍ನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಾಗ ಆತನ ಬಳಿಯಿದ್ದ ಮೊಬೈಲ್‍ಗಳಲ್ಲಿನ ಕೆಲವು ಮೆಸೇಜ್‍ಗಳನ್ನು ಅಳಿಸಿರುವುದು ಕಂಡು ಬಂದಿದ್ದು , ಪೊಲೀಸರು ಆ ಮೊಬೈಲ್‍ಗಳನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಿ ಡಾಟಾ ರಿಟ್ರೈವ್ ಮೂಲಕ ಅಳಿಸಿರುವ ಮೆಸೇಜ್‍ಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಶಂಕಿತ ಉಗ್ರನ ಗ್ರೂಪ್‍ಗಳಲ್ಲಿರುವ ಯುವಕರೊಂದಿಗೆ ಯಾವ ವಿಷಯಗಳ ಬಗ್ಗೆ ಸಂಭಾಷಣೆ ನಡೆಸಿದ್ದಾನೆಂಬುದನ್ನು ಸಹ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಕಳೆದ ಭಾನುವಾರ ಶಂಕಿತ ಉಗ್ರ ವಾಸವಿದ್ದ ಮನೆ ಮೇಲೆ ದಾಳಿ ಮಾಡಿದಾಗ ಕೆಲವು ವಸ್ತುಗಳು ದೊರೆತಿದ್ದು , ಅಲ್‍ಖೈದಾ ಉಗ್ರ ಸಂಘಟನೆ ಜೊತೆ ಯುವಕರನ್ನು ನೇಮಕ ಮಾಡುವ ದಾಖಲೆಗಳು ಪತ್ತೆಯಾಗಿವೆ.
ಜಿಹಾದ್ ಮತ್ತು ಷರಿಯಾ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗಿವೆ. ನಗರದಲ್ಲಿ ಈತನ ಜೊತೆ ವಾಸವಾಗಿದ್ದ ನಾಲ್ವರು ಯುವಕರನ್ನು ಸಹ ವಿಚಾರಣೆಗೊಳಪಡಿಸಿ ಶಂಕಿತ ಉಗ್ರನ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ತಮಿಳುನಾಡಿನ ಸೇಲಂನಲ್ಲಿ ಬಂಧಿಸಲಾಗಿರುವ ಜುಬಾನ್‍ನನ್ನು ನಗರಕ್ಕೆ ಕರೆ ತಂದು ವಿಚಾರಣೆಗೊಳಪಡಿಸಿದ್ದು ,ಆತನಿಂದಲೂ ಹೆಚ್ಚಿನ ಮಾಹಿತಿಗಳು ಲಭ್ಯವಾಗಿವೆ.