ಶಂಕಿತ ಉಗ್ರರ ಜಾಲ: ಕೋಲ್ಕತ್ತಾದಲ್ಲಿ ಸಿಸಿಬಿ ಪೊಲೀಸರಿಂದ ಯುವಕನ ವಿಚಾರಣೆ

Social Share

ಬೆಂಗಳೂರು, ಆ.4- ಅಲ್ ಖೈದಾ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆಂಬ ಆರೋಪದ ಮೇರೆಗೆ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಅವರುಗಳ ಜಾಲದ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ತಿಲಕ್ ನಗರದಲ್ಲಿ ಅಸ್ಸಾಂ ಮೂಲದ ಅಖ್ತರ್ ಹುಸೇನ್ನನ್ನು ಮೊದಲು ಸಿಸಿಬಿ ಪೊಲೀಸರು ಬಂಧಿಸಿ ಆತ ನೀಡಿದ ಮಾಹಿತಿ
ಮೇರೆಗೆ ತಮಿಳುನಾಡಿನ ಸೇಲಂನಲ್ಲಿ ಪಶ್ಚಿಮ ಬಂಗಾಳ ಮೂಲದ ಆದಿಲ್ ಮಂಡಲ್ ಅಲಿಯಾಸ್ ಜುಬಾನಾನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಇವರುಗಳು ನೀಡಿದ ಹೇಳಿಕೆ ಮೇರೆಗೆ ಕೋಲ್ಕತ್ತಾಗೆ ಒಂದು ತಂಡ ತೆರಳಿದೆ.

ಜುಬಾನ್ ಜತೆ ಹೆಚ್ಚಿನ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಕೋಲ್ಕತ್ತಾದಲ್ಲಿ ಪತ್ತೆಹಚ್ಚಿ ಆತನನ್ನು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು, ಯಾವ ರೀತಿ ಇವರಿಬ್ಬರ ಜತೆ ಒಡನಾಟ ಹೊಂದಿದ್ದ, ಯಾವ್ಯಾವ ವಿಷಯಗಳ ಬಗ್ಗೆ ಸಂಭಾಷಣೆ ನಡೆಸಿದ್ದಾರೆಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಅಲ್ಖೈದಾ ಉಗ್ರ ಸಂಘಟನೆ ಟೆಲಿಗ್ರಾಮ್ ಸಂಪರ್ಕ ಹೊಂದಿದ್ದ ಕೋಲ್ಕತ್ತಾ ವ್ಯಕ್ತಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿರಲಿಲ್ಲ. ಆ ಕಾರಣದಿಂದಾಗಿ ಹೆಚ್ಚಾಗಿ ಈತನನ್ನು ಬಳಸಿಕೊಂಡಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಅದೇ ರೀತಿ ಬೇರೆ ರಾಜ್ಯಗಳಲ್ಲಿ ಈ ಇಬ್ಬರು ಶಂಕಿತ ಉಗ್ರರ ಜತೆ ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆಯೂ ಸಿಸಿಬಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ.

ನ್ಯಾಯಾಂಗ ಬಂಧನ: ಇಬ್ಬರು ಶಂಕಿತ ಉಗ್ರರಿಗೆ ಎನ್ಐಎ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ತೀರ್ಪು ನೀಡಿದೆ. ಈ ಇಬ್ಬರನ್ನು ಸಿಸಿಬಿ ಪೊಲೀಸರು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಇವರಿಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Articles You Might Like

Share This Article