ಬೆಂಗಳೂರು, ಜು. 26- ಸಿಸಿಬಿ ಪೊಲೀಸರು ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ಹಾಗೂ ಇವರ ಮೂವರು ಸ್ನೇಹಿತರು ಒಟ್ಟಾಗಿ ಸೇರಿ ಕಾಶ್ಮೀರ ಮೂಲಕ ಆಫ್ಘಾನಿಸ್ತಾನಕ್ಕೆ ತೆರಳಿ ಉಗ್ರ ಸಂಘಟನೆ ಸೇರಲು ಸಿದ್ಧತೆ ಮಾಡಿಕೊಂಡಿದ್ದರೆಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಕೋಲ್ಕತ್ತಾ ಮೂಲದ ಒಬ್ಬ, ಬಾಂಗ್ಲಾದೇಶದ ಇಬ್ಬರು ಹಾಗೂ ತಿಲಕ್‍ನಗರದಲ್ಲಿ ಬಂಧಿತನಾಗಿರುವ ಅಸ್ಸಾಂ ಮೂಲದ ಅಖ್ತರ್‍ಹುಸೇನ್ ಹಾಗೂ ತಮಿಳುನಾಡಿನ ಸೇಲಂನಲ್ಲಿ ಬಂಧಿಸಿರುವ ಜುಬಾನ್ ಇವರೆಲ್ಲರೂ ಸಂಪರ್ಕದಲ್ಲಿದ್ದುದು ಗೊತ್ತಾಗಿದೆ. ಇವರೆಲ್ಲ ಒಟ್ಟಾಗಿ ಸಂಘಟನೆಯೊಂದನ್ನು ಸೇರಲು ಉತ್ಸುಕರಾಗಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.
ಭಾಷಣದ ವಿಡಿಯೋ ಪ್ರೇರಣೆ: ಶಂಕಿತ ಉಗ್ರ ಅಖ್ತರ್ ಹುಸೇನ್ ಚಿಕ್ಕವಯಸ್ಸಿನಿಂದಲೇ ಭಯೋತ್ಪಾದಕ ಸಂಘಟನೆಗಳ ಪ್ರಮುಖ ನಾಯಕರ ಭಾಷಣದ ವಿಡಿಯೋ ನೋಡಿ ಪ್ರೇರಣೆಗೊಡಿದ್ದರು. ಅಲ್ಲದೆ ಮುಸ್ಲಿಮರ ಮೇಲೆ ಭಾರತದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಕಿಡಿಕಾರುತ್ತಿದ್ದ ಎಂಬುದು ತಿಳಿದುಬಂದಿದೆ.
ವಾಟ್ಸಪ್ ಗ್ರೂಪ್ ರಚನೆ: ಸಾಮಾಜಿಕ ಜಾಲತಾಣಗಳಾದ ಟೆಲಿಗ್ರಾಂ, ವಾಟ್ಸಾಪ್ ಮುಖಾಂತರ ಗ್ರೂಪ್ ಮಾಡಿಕೊಂಡು ಜಿಹಾದ್‍ಗೆ ಪ್ರಚೋದನೆ ನೀಡುತ್ತಿದ್ದುದು ಆತನ ಮೊಬೈಲ್‍ಗಳಲ್ಲಿರುವ ಮಾಹಿತಿಯಿಂದ ತಿಳಿದುಬಂದಿದೆ.
ಉಗ್ರಸಂಘಟನೆಗಳ ಒಲವು: ಉಗ್ರ ಸಂಘಟನೆಗಳ ಮೇಲೆ ಒಲವು ಹೊಂದಿದ್ದ ಅಖ್ತರ್, ತನ್ನ ಸಮುದಾಯದವರು ಶೋಷಣೆಗೆ ಒಳಗಾಗಿದ್ದಾರೆಂದು ಹೇಳುತ್ತಾ ಯುವಕರನ್ನು ಹುರಿದುಂಬಿಸುತ್ತಿದ್ದನಲ್ಲದೆ, ವರ್ಷಾಂತ್ಯದಲ್ಲಿ ಆಫ್ಘಾನಿಸ್ತಾನಕ್ಕೆ ಹೋಗಲು ಸಿದ್ಧತೆ ನಡೆಸಿಕೊಂಡಿದ್ದನೆಂಬ ಮಾಹಿತಿ ಗೊತ್ತಾಗಿದೆ.
ಗುಂಪಿನ ಸದಸ್ಯರಿಗೆ ಕರೆ: ಸಾಮಾಜಿಕ ಜಾಲತಾಣಗಳ ಗುಂಪಿನ ಸದಸ್ಯರಿಗೆ ಕರೆ ಮಾಡಿ, ಧರ್ಮದ ಉಳಿವಿಗಾಗಿ ಜಿಹಾದ್ ಮೂಲಕ ಶೋಷಣೆಯಾಗುವುದನ್ನು ತಪ್ಪಿಸಬೇಕೆಂದು ಹೇಳಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದ್ದು, ಈತ ಇದುವರೆಗೂ ಯಾವುದೇ ಉಗ್ರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿಲ್ಲ ಎಂಬುದು ತಿಳಿದುಬಂದಿದೆ.
ನಗರದಲ್ಲಿ ಹಲವು ಕೆಲಸ: ಕೆಲಸ ಅರಸಿಕೊಂಡು ಬೆಂಗಳೂರಿಗೆ 2015ರಲ್ಲಿ ಬಂದಿದ್ದಾಗ ಶಂಕಿತ ಉಗ್ರ ಅಖ್ತರ್‍ಗೆ 17 ವರ್ಷ, 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದ ಈತ ಅಪ್ರಾಪ್ತನಾಗಿದ್ದರಿಂದ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ದ್ವಿತೀಯ ಪಿಯುಸಿಯಾದರೆ ಕೆಲಸ ಸಿಗಬಹುದೆಂದು ಮತ್ತೆ ಅಸ್ಸಾಂಗೆ ತೆರಳಿ ಎರಡು ವರ್ಷದ ಬಳಿಕ ಮತ್ತೆ ನಗರಕ್ಕೆ ಬಂದು, ಗಾರ್ಮೆಂಟ್ಸ್, ಸೆಕ್ಯುರಿಟಿ ಗಾರ್ಡ್ ಹೀಗೆ ವಿವಿಧ ಕೆಲಸ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ ಅಖ್ತರ್ ತಾಯಿ ನಿಧನರಾಗಿದ್ದರಿಂದ ಅಸ್ಸಾಂಗೆ ಹೋಗಿ, ನಂತರ ಫುಡ್ ಡೆಲಿವರಿ ಕೆಲಸಕ್ಕೆ ಸೇರಿಕೊಂಡಿದ್ದನೆಂಬ ಮಾಹಿತಿ ಲಭ್ಯವಾಗಿದೆ.
ಗೌಪ್ಯ ಸ್ಥಳದಲ್ಲಿ ವಿಚಾರಣೆ: ಶಂಕಿತ ಉಗ್ರ ಅಖ್ತರ್ ಹುಸೇನ್ ನೀಡಿದ ಮಾಹಿತಿ ಮೇರೆಗೆ ತಮಿಳುನಾಡಿನ ಸೇಲಂನಲ್ಲಿ ನಿನ್ನೆ ಮತ್ತೊಬ್ಬ ಶಂಕಿತ ಉಗ್ರ ಜುಬಾನ್‍ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿರುವ ಪೊಲೀಸರು, ಇವರಿಬ್ಬರನ್ನೂ ನಿಗೂಢ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.