ದ್ವಿತೀಯ ದರ್ಜೆ ಸಹಾಯಕ ಅಮಾನತು

ಬೆಂಗಳೂರು, ಮಾ.26- ಗಾಂಧಿನಗರ ಕ್ಷೇತ್ರದ ವಾರ್ಡ್ ನಂ.121ರ ಕಾಮಗಾರಿಗೆ ಸಂಬಂಧಿಸಿ ದಂತೆ ಪಾಲಿಕೆ ಆಯುಕ್ತರ ಆದೇಶದಂತೆ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕಹೊನ್ನಯ್ಯ ಅವರನ್ನು ಅಮಾನತು ಮಾಡಲಾಗಿದೆ. ಕಾಮಗಾರಿ ಮಾಡದೆ ನಕಲಿ ಬಿಲ್ ಸೃಷ್ಟಿಸಿ ಪಾಲಿಕೆಯಿಂದ ಒಂದು ಕೋಟಿ ರೂ. ಬಿಲ್ ಪಡೆದು ವಂಚಿಸಿರುವ ದ್ವಿತೀಯ ದರ್ಜೆ ಗುಮಾಸ್ತನನ್ನು ಅಮಾನತು ಮಾಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಆಡಳಿತಾಧಿಕಾರಿ ಗೌರವ್‍ಗುಪ್ತ ಹಾಗೂ ಆಯುಕ್ತರಿಗೆ ದೂರು ನೀಡಿದ್ದರು.

ಗಾಂಧಿನಗರ ವಾರ್ಡ್ 121ರಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಕೆಆರ್‍ಐಡಿಎಲ್‍ಗೆ ಕಾರ್ಯಾದೇಶ ಪತ್ರ ನೀಡಲಾಗಿತ್ತು. ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ನಮೂದಿಸಿ ಮಾಡದ ಕಾಮಗಾರಿಗೆ 96,83,379ರೂ.ಗಳನ್ನು ಚೆಕ್ ಮೂಲಕ ಬಿಡುಗಡೆ ಮಾಡಲಾಗಿತ್ತು. ಆದರೆ, ಕಾಮಗಾರಿಯನ್ನು ಪೂರ್ಣಗೊಳಿಸದೆ ಚಿಕ್ಕಹೊನ್ನಯ್ಯ ಲೆಕ್ಕ ಅಧೀಕ್ಷಕ ಎಂ.ಉಮೇಶ್ ಅವರ ಸಹಿಯನ್ನು ತಾವೇ ಮಾಡಿಕೊಂಡು ಬೇರೆ ಸ್ಥಳದಲ್ಲಿ ಮಾಡಿರುವ ಕಾಮಗಾರಿಗಳ ಛಾಯಚಿತ್ರಗಳನ್ನು ಲಗತ್ತಿಸಿ ಸುಮಾರು ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಬಿಬಿಎಂಪಿಗೆ ವಂಚಿಸಿದ್ದಾರೆ ಎನ್ನಲಾಗಿದೆ.

ಕಳೆದ 15 ವರ್ಷಗಳಿಂದಲೂ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿರುವ ಚಿಕ್ಕಹೊನ್ನಯ್ಯ ಅದೇ ಕಚೇರಿಯಲ್ಲಿ ಲೆಕ್ಕ ಅಧೀಕ್ಷಕನಾಗಿ ಕೆಲಸ ಮಾಡುತ್ತಿರುವ ಉಮೇಶ್ ಅವರ ಸಹಿಯನ್ನು ನಕಲಿ ಮಾಡಿದ್ದಾರೆ. ಅದೇ ರೀತಿ 121ನೇ ವಾರ್ಡ್‍ನ ಸಹಾಯಕ ಅಭಿಯಂತರರ ಬದಲಾಗಿ ಪಕ್ಕದ ವಾರ್ಡ್ ಸಹಾಯಕ ಆಭಿಯಂತರರಿಂದ ಸಹಿ ಮಾಡಿಸಿರುತ್ತಾರೆ. ಮೂರ್ನಾಲ್ಕು ಬಾರಿ ಮುಂಬಡ್ತಿ ಪಡೆದಿದ್ದರೂ ಸಹ ಚಿಕ್ಕಹೊನ್ನಯ್ಯ ಅವರು ಅವ್ಯವಹಾರ ಮುಂದುವರೆಸಿ ದ್ದರು. ಗುತ್ತಿಗೆದಾರ ಚಂದ್ರಪ್ಪ ಎಂಬುವರೊಂದಿಗೆ ಸೇರಿಕೊಂಡು ಈ ಗೋಲ್ ಮಾಲ್ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಡದೇ ಇರುವ ಕಾಮಗಾರಿಗೆ ಬಿಲ್ ಮಾಡಿಸಿಕೊಂಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಆಯುಕ್ತರ ಆದೇಶದಂತೆ ಚಿಕ್ಕಹೊನ್ನಯ್ಯ ಅವರನ್ನು ಅಮಾನತು ಮಾಡಲಾಗಿದೆ.