ಗಾಂಧಿ ಪ್ರತಿಮೆ ಎದುರು ಸಂಸದರ ಅಹೋರಾತ್ರಿ ಧರಣಿ ಮುಂದುವರಿಕೆ

Social Share

ನವದೆಹಲಿ, ಜು.28- ಅಗತ್ಯ ವಸ್ತುಗಳ ಬೆಲೆ ಏರಿಕೆ, ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಉಭಯ ಸದನಗಳಲ್ಲಿ ಗದ್ದಲ ಮಾಡಿ ಅಮಾನತುಗೊಂಡಿರುವವರ, ಸಂಸದರು ಸಂಸತ್‍ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಹೋರಾಟ ಇಂದು ಕೂಡ ಮುಂದುವರೆದಿದೆ.

ಬುಧುವಾರ ಬೆಳಗ್ಗೆ 11 ಗಂಟೆಯಿಂದ ಆರಂಭಿಸಿರುವ ಅಹೋರಾತ್ರಿ ಧರಣಿ ಹೋರಾಟ ನಾಳೆ ಮಧ್ಯ ರಾತ್ರಿ ಒಂದು ಗಂಟೆಯವರೆಗೂ ಸುಮಾರು 50 ಗಂಟೆಗಳ ಕಾಲ ಮುಂದುವರೆಯಲಿದೆ. ಧರಣಿ ಸತ್ಯಾಗ್ರಹದಲ್ಲಿ ಸರದಿಯಂತೆ ಸಂಸದರು ಭಾಗವಹಿಸಲಿದ್ದಾರೆ.

ನಿನ್ನೆ ರಾತ್ರಿ ನಡೆದ ಅಹೋರಾತ್ರಿ ಹೋರಾಟದಲ್ಲಿ ತೃಣಮೂಲ ಕಾಂಗ್ರೆಸ್ ಶಂತುನು ಸೆನ್, ಡೆರಿಕ್ ಒ ಬ್ರೈನ್, ಸಿಪಿಎಂನ ಸಂದೋಷ್ ಕುಮಾರ್, ತೆಲುಗು ರಾಷ್ಟ್ರ ಸಮಿತಿಯ ರವಿಚಂದ್ರ ವಡ್ಡಿರಾಜು, ಅಮ್‍ಆದ್ಮಿಯ ಸಂಜಯ್ ಸಿಂಗ್, ಡಿಎಂಕೆಯ ಒಬ್ಬ ಸಂಸದರು ಭಾಗವಹಿಸಿದ್ದರು.

ಧರಣಿ ನಿರತರಿಗೆ ಇಂದು ಬೆಳಗ್ಗೆ ಆರು ಗಂಟೆಗೆ ಕಾಫಿ, ಟೀ ಒದಗಿಸಲಾಗಿದೆ, ಬೆಳಗ್ಗೆ 8 ಗಂಟೆಗೆ ಉಪಹಾರ ಪೂರೈಸಲಾಗಿದೆ.
ಜನ ಪರ ಚರ್ಚೆಗಳ ವೇದಿಕೆಯಾಗಬೇಕಿದ್ದ ಸಂಸತ್ ರಾಜಕೀಯ ಮೇಲಾಟಗಳಿಗೆ ಬಲಿಯಾಗುತ್ತಿದೆ. ಅಹೋರಾತ್ರಿ ಹೋರಾಟದಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ. ಹಂತ ಹಂತವಾಗಿ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿವೆ. ಧರಣಿ ನಿರತರಿಗೆ ಉಪಹಾರ, ಊಟ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ವಿರೋಧ ಪಕ್ಷಗಳೇ ವ್ಯವಸ್ಥೆ ಮಾಡಿವೆ.

ಮಹಾತ್ಮಗಾಂಧಿ ಪ್ರತಿಮೆ ಎದುರು ತೆರೆದ ಬಯಲಿಯನಲ್ಲಿ ಹಾಸಿಗೆ ಮಾದರಿಯ ಹೊದಿಕೆಗಳನ್ನು ವ್ಯವಸ್ಥೆ ಮಾಡಿ ಧರಣಿ ನಡೆಸಲಾಗಿದೆ. ರಾತ್ರಿ ಅದರ ಮೇಲೆಯೇ ಸಂಸದರು ಮಲಗಿದ್ದಾರೆ. ಹೋರಾಟಕ್ಕಾಗಿ ತಾತ್ಕಾಲಿಕ ಟೆಂಟ್ ಹಾಕಲು ಪ್ರತಿಪಕ್ಷಗಳ ಶಾಸಕರು ಮಾಡಿದ ಮನವಿಯನ್ನು ಲೋಕಸಭೆಯ ಸಂಬಂಧಿಸಿದ ಪ್ರಾಧಿಕಾರ ಮಾನ್ಯ ಮಾಡಿಲ್ಲ. ಹೀಗಾಗಿ ಸಂಸದರು ತೆರದ ಬಯಲಿನಲ್ಲೇ ತಮ್ಮ ಹೋರಾಟ ಮುಂದುವರೆಸಿವೆ.

ಧರಣಿ ನಿರತರಿಗಾಗಿ ಶೌಚಾಲಯ ವ್ಯವಸ್ಥೆಯನ್ನು ಬಾಗಿಲು ತೆರೆದಿಡಬೇಕು ಮತ್ತು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ಅವರಿಗೆ ಸಂಸದರು ಮನವಿ ಮಾಡಿದ್ದರು.

ಆರೋಪ ಪ್ರತ್ಯಾರೋಪ: ಸಂಸತ್ ಗದ್ದಲಗಳ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ 20, ಲೋಕಸಭೆಯಲ್ಲಿ ನಾಲ್ವರು ಸಂಸದರನ್ನು ಅಮಾನತು ಮಾಡಲಾಗಿದೆ. ಗದ್ದಲ ಮಾಡಿದವರು ಕ್ಷಮೆ ಕೇಳಿದರೆ ಅಮಾನತು ಹಿಂಪಡೆಯುವ ಕುರಿತು ಪರಿಶೀಲನೆ ನಡೆಸುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಪ್ರತಿಪಕ್ಷಗಳ ಸದಸ್ಯರು, ನಾವೇನು ತಪ್ಪಿಲ್ಲ. ಜನರ ಸಮಸ್ಯೆಗಳ ಕುರಿತು ದ್ವನಿ ಎತ್ತುವುದು ಅಪರಾಧವಲ್ಲ. ನಮ್ಮ ಕರ್ತವ್ಯ. ಬೆಲೆ ಏರಿಕೆ, ಜಿಎಸ್‍ಟಿ ಹೇರಿಕೆ, ನಿರುದ್ಯೋಗ, ಅಗ್ನಿಪತ್ ನೇಮಕಾತಿ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆಗೆ ಸಮಯಾವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿವೆ.

Articles You Might Like

Share This Article