ಮೆಟ್ರೋ ನಿಲ್ದಾಣದಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಅನುಮಾನಾಸ್ಪದ ವ್ಯಕ್ತಿಗಾಗಿ ಶೋಧ
ಬೆಂಗಳೂರು, ಮೇ 9- ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಕರ ಸೋಗಿನಲ್ಲಿ ಬಂದು ಪರಿಶೀಲನೆ ವೇಳೆ ಅನುಮಾನಾಸ್ಪದ ನಡೆ ತೋರಿ ಪರಾರಿಯಾಗಿರುವ ವ್ಯಕ್ತಿಗಾಗಿ ನಗರ ಪಶ್ಚಿಮ ವಿಭಾಗದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಎಸಿಪಿ ನೇತೃತ್ವದಲ್ಲಿ ಐದು ಮಂದಿ ಇನ್ಸ್ಪೆಕ್ಟರ್ಗಳು, ಎಂಟು ಮಂದಿ ಸಬ್ಇನ್ಸ್ಫೆಕ್ಟರ್ಗಳು ಸೇರಿದಂತೆ 50ಕ್ಕೂ ಹೆಚ್ಚು ಸಿಬ್ಬಂದಿ ಅನುಮಾನಾಸ್ಪದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮೆಜೆಸ್ಟಿಕ್, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಿರುವ ತನಿಖಾ ತಂಡ, ಕಾಟನ್ಪೇಟೆ, ಚಿಕ್ಕಪೇಟೆ ವ್ಯಾಪ್ತಿಯ ಎಲ್ಲಾ ಲಾಡ್ಜ್ಗಳ ತಪಾಸಣೆ ಮಾಡಲಾಗುತ್ತಿದೆ. ಕಳೆದ ಮಂಗಳವಾರದಿಂದಲೂ ಚಿಕ್ಕಪೇಟೆ ಉಪವಿಭಾಗದ ಪೊಲೀಸರು ಹಗಲಿರುಳು ಶಂಕಿತ ವ್ಯಕ್ತಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದರೂ ಸುಳಿವು ಲಭ್ಯವಾಗಿಲ್ಲ.
ಮಂಗಳವಾರ ರಾತ್ರಿ 7.15ರ ಸುಮಾರಿನಲ್ಲಿ ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣಕ್ಕೆ ಕಪ್ಪುಕೋಟು ಧರಿಸಿ ತಲೆಗೆ ಬಿಳಿ ಬಟ್ಟೆ ಕಟ್ಟಿಕೊಂಡು ಬಂದಿದ್ದ ಮಧ್ಯವಯಸ್ಕ ಗಡ್ಡದಾರಿ ವ್ಯಕ್ತಿ ಒಳಗೆ ಬರುತ್ತಿದ್ದಂತೆ ಲೋಹಶೋಧಕ ಯಂತ್ರದ ಕೆಂಪು ದೀಪದಲ್ಲಿ ಒಂದೇ ಸಮನೆ ಬೀಪ್ಸದ್ದು ಮೊಳಗಲಾರಂಭಿಸಿದೆ.
ತಕ್ಷಣ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯ ಕೈಯಲ್ಲಿದ್ದ ಬ್ಯಾಗನ್ನು ತಪಾಸಣೆ ನಡೆಸಲು ಮುಂದಾದಾಗ ಏನೋ ಹುಡುಕುವ ನೆಪದಲ್ಲಿ ನುಮಾನಾಸ್ಪದ ನಡೆ ತೋರಿ, ಸಬೂಬು ಹೇಳಿ ನಿಲ್ದಾಣದಿಂದ ಹೊರಗಡೆ ನಡೆದುಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆ ಸಂದರ್ಭದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಹೌಸ್ಕೀಪಿಂಗ್ ಮಹಿಳೆ ಹಾಗೂ ಸೆಕ್ಯೂರಿಟಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮೆಟ್ರೋ ನಿಲ್ದಾಣದಿಂದ ನಗರ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗದ ಮೂಲಕ ಹಾದು ಹೋಗಿ ತಪ್ಪಿಸಿಕೊಂಡಿರುವ ಅನುಮಾನಾಸ್ಪದ ವ್ಯಕ್ತಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.