ಚಳಿಗಾಲದ ಅಧಿವೇಶನಕ್ಕೆ ಮಾತ್ರ ಸೀಮಿತವಾದ ಸುವರ್ಣಸೌಧ, ಕಾಗದದಲ್ಲೇ ಉಳಿದ ಕಚೇರಿಗಳ ಸ್ಥಳಾಂತರ ಆದೇಶ

Social Share

ಬೆಂಗಳೂರು, ಡಿ.17- ಬೆಳಗಾವಿ ಸುವರ್ಣಸೌಧ ಸೇರಿ ಉತ್ತರ ಕರ್ನಾಟಕ ಭಾಗಕ್ಕೆ ಕೆಲ ಪ್ರಮುಖ ರಾಜ್ಯಮಟ್ಟದ ಸರ್ಕಾರಿ ಕಚೇರಿಗಳ ಸ್ಥಳಾಂತರಿಸುವ ಆದೇಶ ಇನ್ನೂ ಕಾಗದದಲ್ಲಿಯೇ ಉಳಿದಿದೆ. ಉತ್ತರ ಕರ್ನಾಟಕದ ಮೂಲದ ಸಿಎಂ ಬೊಮ್ಮಾಯಿಯೇ ಬೆಳಗಾವಿ ಸುವರ್ಣಸೌಧವನ್ನು ಕ್ರಿಯಾಶೀಲವನ್ನಾಗಿ ಮಾಡುತ್ತೇನೆಂದು ಪದೇ ಪದೆ ಹೇಳಿದ್ದರೂ
ಅದು ಬರೀ ಮುಖಸ್ತುತಿಯಾಗಿ ಉಳಿದಿದೆ.

ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಬೆಂಗಳೂರಿನಿಂದ ಕೆಲ ಪ್ರಮುಖ ಸರ್ಕಾರಿ ಕಚೇರಿಗಳನ್ನೂ ಸ್ಥಳಾಂತರಿಸಬೇಕು ಎಂಬುದು ಬಹು ವರ್ಷಗಳಿಂದ ಇರುವ ಬೇಡಿಕೆ. ಆದರೆ ಈ ಕೂಗು ಅರಣ್ಯರೋದನ ಆಗಿದೆಯೇ ಹೊರತು ಅನುಷ್ಠಾನ ಮಾತ್ರ ವಿಳಂಬಗೊಂಡಿದೆ.

ಚಳಿಗಾಲದ ಅವೇಶನಕ್ಕೆ ಸೀಮಿತ: ಉತ್ತರ ಕರ್ನಾಟಕದ ಕಡೆಗಣನೆ ಪದೇ ಪದೆ ಕೇಳಿ ಬರುತ್ತಿರುವ ಕೂಗು. ಆ ಭಾಗದ ಜನ, ರೈತ ಹೋರಾಟಗಾರರು, ಜನಪ್ರತಿನಿಗಳು ಉತ್ತರ ಕರ್ನಾಟಕ ನಿರ್ಲಕ್ಷ್ಯದ ಬಗ್ಗೆ ಹಲವು ವರ್ಷಗಳಿಂದ ದನಿ ಎತ್ತುತ್ತಲೇ ಇದ್ದಾರೆ.

ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿ ದಶಕ ಕಳೆದರೂ ರಾಜ್ಯಮಟ್ಟದ ಕಚೇರಿಗಳು ಇನ್ನೂ ಬಂದಿಲ್ಲ. ಆ ಭವ್ಯ ಕಟ್ಟಡ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತಾಗಿದೆ. ಬರೀ ಚಳಿಗಾಲದ ಅವೇಶನ ನಡೆಸಲೂ ಮಾತ್ರ ಸೀಮಿತವಾಗಿದೆ.

ಸುಮಾರು 450 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೆಳಗಾವಿ ಸುವರ್ಣವಿಧಾನಸೌಧ ಸರ್ಕಾರದ ಪಾಲಿಗೆ ಬಿಳಿ ಆನೆ ಎಂಬ ಕುಖ್ಯಾತಿ ಪಡೆದಿದೆ. ಯಾವುದೇ ಸರ್ಕಾರಗಳಿಗೂ ಉತ್ತರ ಕರ್ನಾಟಕ ಭಾಗಕ್ಕೆ ಸಂಬಂಧಿಸಿದ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ.

ವಾರ್ಷಿಕ ಸುಮಾರು 5 ಕೋಟಿ ರೂ. ಕಟ್ಟಡದ ನಿರ್ವಹಣಾ ವೆಚ್ಚವಾಗುತ್ತಿದೆ. ನಾಲ್ಕು ಅಂತಸ್ತಿನ ಸುವರ್ಣ ವಿಧಾನಸೌಧ 60,398 ಚ.ಮೀ. ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ. ಒಟ್ಟು 38 ಸಚಿವರ ಕಚೇರಿ, 14 ಕಾನರೆನ್ಸ್ ಹಾಲ್ಗಳನ್ನು ಹೊಂದಿದೆ. ಆದರೆ ಇಷ್ಟು ದೊಡ್ಡ ಕಟ್ಟಡ ಇನ್ನೂ ಸಂಪೂರ್ಣವಾಗಿ ಸದ್ಬಳಕೆಯಾಗದೇ ಬರೀ 10 ದಿನದ ಚಳಿಗಾಲದ ಅವೇಶನಕ್ಕೆ ಮಾತ್ರ ಸೀಮಿತಗೊಂಡಿದೆ.

ಕಚೇರಿ ಸ್ಥಳಾಂತರ ಸ್ಥಿತಿಗತಿ ವಿಳಂಬ: 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಟ್ಟು 9 ವಿವಿಧ ಕಚೇರಿಗಳನ್ನು ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದರು.

ಆಲಮಟ್ಟಿಗೆ ಕೃಷ್ಣ ಭಾಗ್ಯ ಜಲ ನಿಗಮ, ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ, ಬೆಳಗಾವಿಗೆ ಕರ್ನಾಟಕ ರಾಜ್ಯ ಜವಳಿ ಮೂಲಭೂತ ಅಭಿವೃದ್ಧಿ ನಿಗಮ, ಹಂಪಿಗೆ ಪುರಾತತ್ವ ಸಂಗ್ರಹಾಲಯಗಳ ಪರಂಪರೆ ಇಲಾಖೆ, ಬೆಳಗಾವಿಗೆ ಕಬ್ಬು ಅಭಿವೃದ್ಧಿ ಆಯುಕ್ತಾಲಯ ಮತ್ತು ಸಕ್ಕರೆ ನಿರ್ದೇಶನಾಲಯ, ಹುಬ್ಬಳ್ಳಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಂದು ವಿಭಾಗ, ಧಾರವಾಡಕ್ಕೆ ಕರ್ನಾಟಕ ರಾಜ್ಯ ಮಾನವಹಕ್ಕು ಆಯೋಗದ ಒಬ್ಬ ಸದಸ್ಯ, ಧಾರವಾಡಕ್ಕೆ ಒಂದು ಉಪ ಲೋಕಾಯುಕ್ತ ಕಚೇರಿ ಮತ್ತು ಬೆಳಗಾವಿ ಹಾಗೂ ಕಲಬುರಗಿಗೆ ತಲಾ ಒಂದರಂತೆ ಎರಡು ಮಾಹಿತಿ ಆಯುಕ್ತರ ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

2020ರಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಪೀಠ ಮಾತ್ರ ಕಾರ್ಯಾರಂಭಿಸಿದೆ. ರಾಜ್ಯ ಮಾಹಿತಿ ಆಯೋಗ ಬೆಳಗಾವಿ ಪೀಠದ ನ್ಯಾಯಾಲಯ ಕಲಾಪ 2022ರ ಜೂನ್ 22ರಿಂದ ಆರಂಭಗೊಂಡಿದೆ.

ಜವಳಿ ಅಭಿವೃದ್ಧಿ ನಿಗಮ: ಬೆಳಗಾವಿಗೆ 1.10.2019ರಲ್ಲಿ ಜವಳಿ ಅಭಿವೃದ್ಧಿ ನಿಗಮದ ಕಚೇರಿಯೂ ಸ್ಥಳಾಂತರಗೊಂಡಿದ್ದು, ಸಂಪೂರ್ಣವಾಗಿ ಬೆಳಗಾವಿಯಿಂದಲೇ ಕಾರ್ಯನಿರ್ವಹಿಸುತ್ತಿದೆ. ಆದರೆ, ಎಲ್ಲ ಆಡಳಿತಾತ್ಮಕ ಕೆಲಸಗಳಿಗೆ ಅಧಿಕಾರಿಗಳು ಬೆಂಗಳೂರಿಗೆ ನಿತ್ಯ ಬಂದು ಹೋಗುವಂಥ ಪರಿಸ್ಥಿತಿ ಎದುರಾಗಿದೆ.

ಇತ್ತ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯವನ್ನು ಬೆಂಗಳೂರಿನಿಂದ ಬೆಳಗಾವಿಗೆ ಸ್ಥಳಾಂತರಗೊಂಡಿದೆ. ಆದರೆ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಆದೇಶ ಹೊರಡಿಸಲಾಗಿದ್ದರೂ, ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸದ್ಯ ಬೆಳಗಾವಿ ನಗರದಲ್ಲಿ ನಿರ್ದೇಶನಾಲಯ ಬಹುತೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಕಡತ ವ್ಯವಹಾರ ಅಲ್ಲಿಂದಲೇ ನಡೆಯುತ್ತಿದೆ ಎಂದು ಬೆಳಗಾವಿ ಹೋರಾಟಗಾರ ಅಶೋಕ್ ಚಂದರಗಿ ತಿಳಿಸಿದ್ದಾರೆ.

ಬೆಳಗಾವಿ ಸುವರ್ಣಸೌಧದಲ್ಲಿ ಸುಮಾರು 23 ಜಿಲ್ಲಾ ಮಟ್ಟದ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಜಿಲ್ಲಾ ಮಟ್ಟದ ಕಚೇರಿಗಳನ್ನು ಬೆಳಗಾವಿ ಸುವರ್ಣಸೌಧಕ್ಕೆ ಸ್ಥಳಾಂತರಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ನಗರದಿಂದ 14 ಕಿ.ಮೀ ದೂರದ ಸುವರ್ಣ ವಿಧಾನಸೌಧಕ್ಕೆ ನಿತ್ಯದ ಕೆಲಸಗಳಿಗೆ ಹೋಗಬೇಕಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಕೃಷ್ಣ ಭಾಗ್ಯ ಜಲ ನಿಗಮದ ಬಹುತೇಕ ಕಚೇರಿ ಆಲಮಟ್ಟಿಗೆ ಸ್ಥಳಾಂತರಗೊಂಡಿದೆ. ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿದೆ. ಆದರೆ ಹಲವು ತಾಂತ್ರಿಕ ಸಮಿತಿಗಳು ಬೆಂಗಳೂರಿನಲ್ಲಿರುವುದರಿಂದ ಕಾರ್ಯನಿರ್ವಹಣೆ ಕಷ್ಟವಾಗುತ್ತಿದೆ.

ಇತ್ತ ಮೈಸೂರಿನಲ್ಲಿದ್ದ ಪುರಾತತ್ವ ಸಂಗ್ರಹಾಲಯಗಳು ಪರಂಪರೆ ಇಲಾಖೆಯನ್ನು ಹಂಪಿಗೆ ಸ್ಥಳಾಂತರ ಮಾಡಲಾಗಿದೆ. ಏಪ್ರಿಲ್ 2019ರಿಂದ ಉಪನಿರ್ದೇಶಕರ ಕಚೇರಿ ಹಂಪಿಯಿಂದ ಕಾರ್ಯನಿರ್ವಹಿಸುತ್ತಿದೆ.
ಇನ್ನೂ ಸ್ಥಳಾಂತರವಾಗದ ಕಚೇರಿಗಳು: ಇತ್ತ ದಾವಣಗೆರೆಗೆ ಕರ್ನಾಟಕ ನೀರಾವರಿ ನಿಗಮ ಸ್ಥಳಾಂತರಬಾಗಬೇಕಿದೆ. ಆದರೆ ಜಲಸಂಪನ್ಮೂಲ ಇಲಾಖೆ ಯೋಜನಾ ಇಲಾಖೆಗೆ ಪತ್ರ ಬರೆದು ಆಡಳಿತಾತ್ಮಕ ಕಾರಣದಿಂದ ಎಲ್ಲ ಕಚೇರಿಗಳ ಸ್ಥಳಾಂತರ ಕಷ್ಟ ಸಾಧ್ಯವೆಂದು ತಿಳಿಸಿದೆ. ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯನ್ನು ವಿಭಜಿಸಿ ಒಂದು ವಿಭಾಗವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ ಈ ವಿಭಜನೆ ಪ್ರಸ್ತಾಪ ನಗರಾಭಿವೃದ್ಧಿ ಇಲಾಖೆಯಲ್ಲೇ ಇದ್ದು, ಸ್ಥಳಾಂತರ ಸಾಧ್ಯವಾಗಿಲ್ಲ. ಅದೇ ರೀತಿ ಕಲಬುರಗಿಗೆ ಸ್ಥಳಾಂತರಿಸಲು ಉದ್ದೇಶಿಸಿರುವ ಮತ್ತೊಂದು ಮಾಹಿತಿ ಆಯೋಗ ಕಚೇರಿ ಸ್ಥಾಪನೆಗೆ ಸೂಕ್ತ ಸ್ಥಳದ ಹುಡುಕಾಟ ನಡೆಸಲಾಗುತ್ತಿದೆ. ಅದೂ ಇನ್ನೂ ಸಾಧ್ಯವಾಗಿಲ್ಲ.

Articles You Might Like

Share This Article