ಕೆಂಪೇಗೌಡರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕು : ನಿರ್ಮಲಾನಂದನಾಥ ಶ್ರೀ

ಬೆಂಗಳೂರು, ಜು.11- ಕನ್ನಡ ನಾಡನ್ನು ಸುದೀರ್ಘ ಕಾಲ ಆಳಿದ ಗಂಗರಸರು ನಾಡಪ್ರಭು ಕೆಂಪೇಗೌಡರ ಮೂಲ ವಂಶಸ್ಥರು. ಸಂಶೋಧನೆ ಮೂಲಕ ಇಂತಹ ವಿಷಯಗಳನ್ನು ಇನ್ನಷ್ಟು ತಿಳಿಯಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.  ಆದಿಚುಂಚನಗಿರಿ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಪ್ರತಿಷ್ಠಾನ ನಮ್ಮವರು ಬಳಗದಿಂದ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 512ನೆ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ನಮ್ಮ ಹಿಂದಿನ ಪರಂಪರೆ ಅರಿಯಬೇಕಾದರೆ ಇತಿಹಾಸದ ಅರಿವು ನಮಗಿರಬೇಕು. ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ನಮ್ಮ ಪರಂಪರೆ ಬದುಕಿಗೆ ಶಕ್ತಿ ಎಂದರು. ಇತಿಹಾಸ ಅರಿತು ಮಕ್ಕಳಿಗೂ ಸ್ಪಷ್ಟ ಇತಿಹಾಸ ಹೇಳಿಕೊಡಬೇಕು. ಈ ಹಿನ್ನೆಲೆಯಲ್ಲಿ ಕೆಂಪೇಗೌಡರ ಬಗ್ಗೆ ಮತ್ತಷ್ಟು ಸಂಶೋಧನೆಗಳು ನಡೆಯಬೇಕು ಎಂದು ಪ್ರತಿಪಾದಿಸಿದರು.

ಕೆಂಪೇಗೌಡರ ವಂಶಸ್ಥರು 15ನೆ ಶತಮಾನದಲ್ಲಿ ಬೆಳಕಿಗೆ ಬಂದವರಲ್ಲ.ಅದಕ್ಕೂ ಮುನ್ನ ಅಂದರೆ 2ನೆ ಶತಮಾನದಿಂದಲೇ ಅವರ ರಾಜಪ್ರಭುತ್ವ ಇತ್ತು. ಇದರ ಬಗ್ಗೆಯೂ ಅಧ್ಯಯನ ನಡೆಯಬೇಕಿದೆ. 1850ರ ಸೌತ್ ಇಂಡಿಯನ್ ಗೆಜೆಟಿಯರ್‍ನಲ್ಲಿ ಕೆಂಪೇಗೌಡರು ಕಟ್ಟಿರುವ ಕೋಟೆಗಳ ಬಗ್ಗೆ ವಿಸ್ತೃತವಾಗಿ ಬರೆಯಲಾಗಿದೆ. ಆದರೆ, ಕೆಂಪೇಗೌಡರ ಬಗ್ಗೆ ಎಲ್ಲೂ ಬರೆದಿಲ್ಲ. ಇದಕ್ಕೆ ಕಾರಣ ಸಂದರ್ಭ ಹಾಗೂ ಅಂದಿನ ಸ್ಥಿತಿ ನಡುವಿನ ಕೊಂಡಿ ಕಳೆದುಹೋಗಿರುವುದೇ ಆಗಿದೆ. ಹಾಗಾಗಿ ಅಧ್ಯಯನದ ಮೂಲಕ ಅದನ್ನು ಹೊರತೆಗೆದು ಸಮಾಜಕ್ಕೆ ತಿಳಿಸಿ ಅಭಿವೃದ್ಧಿ ಪಥದತ್ತ ಸಾಗಬೇಕಿದೆ ಎಂದು ವಿವರಿಸಿದರು.

ಕೆಂಪೇಗೌಡರು ಅಗ್ರಹಾರಗಳನ್ನು ಕಟ್ಟಿಸಿದ್ದ ಉದ್ದೇಶವೇ ಜ್ಞಾನ ವಿಸ್ತರಣೆಯಾಗಿತ್ತು. ಆಧುನಿಕ ವಿಜ್ಞಾನ, ಗಣಿತದ ಪ್ರಗತಿಗೆ ಭಾರತೀಯ ಕೊಡುಗೆ ಅಧಿಕವಾಗಿದೆ. ಖ್ಯಾತ ವಿಜ್ಞಾನಿ ಐನ್‍ಸ್ಟೀನ್ ಸಹ ಇದನ್ನೇ ಹೇಳಿದ್ದಾರೆ ಎಂದು ನೆನಪಿಸಿದರು. ಸರ್ವಜನಾಂಗದವರಿಗೂ ಅನುಕೂಲವಾಗುವ ರೀತಿಯಲ್ಲಿ ಬೆಂಗಳೂರನ್ನು ಕೆಂಪೇಗೌಡರು ನಿರ್ಮಿಸಿದ್ದರು. ಆದರೆ, ಅಂತಹ ಕೆಂಪೇಗೌಡರ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ವಿಷಾದಿಸಿದರು.

ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಕೆಂಪೇಗೌಡರ ಹೆಸರನ್ನು ಬೆಂಗಳೂರಿನ ನಾನಾ ಪ್ರದೇಶಗಳಿಗೆ ಇಟ್ಟರೆ ಉಪಕಾರ ಮಾಡಿದಂತಲ್ಲ. ಅದು ಅವರಿಗೆ ಸಂದಾಯ ಮಾಡುವ ಋಣ. ಈ ನಗರ ಕಟ್ಟಿದ್ದು ಮತ್ತು ಬೆಳೆದದ್ದು ಅವರ ಅದ್ಭುತ ಕಲ್ಪನೆ ಮತ್ತು ತ್ಯಾಗದಿಂದ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸೌಮ್ಯನಾಥ ಸ್ವಾಮೀಜಿ, ಶ್ರೀ ಅನ್ನದಾನೇಶ್ವರ ನಾಥ ಸ್ವಾಮೀಜಿ, ವಿವಿಧ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.