ದೇಶಭ್ರಷ್ಟ ನೀರವ್ ಮೋದಿ ಮತ್ತು ಆತನ ಸಹೋದರಿಯ 283 ಕೋಟಿ ರೂ. ಮುಟ್ಟುಗೋಲು..!

ನವದೆಹಲಿ, ಜೂ.27- ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 12,400 ಕೋಟಿ ರೂ.ಗಳನ್ನು ವಂಚಿಸಿ ಆರ್ಥಿಕ ದೇಶಭ್ರಷ್ಟನಾಗಿರುವ ಕಳಂಕಿತ ವಜ್ರೋದ್ಯಮಿ ನೀರವ್ ಮೋದಿ ಮತ್ತು ಆತನ ಸಹೋದರಿ ಪೂರ್ವಿ ಮೋದಿ ಅವರ ಸ್ವಿಟ್ಜರ್‍ಲ್ಯಾಂಡ್ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ನಾಲ್ಕು ಬ್ಯಾಂಕ್ ಖಾತೆಗಳಲ್ಲಿ ಒಟ್ಟು 283 ಕೋಟಿ ರೂ.ಗಳ ಹಣವನ್ನು ಅಕ್ರಮವಾಗಿ ಠೇವಣಿ ಇಡಲಾಗಿತ್ತು. ಈ ಮಹತ್ವದ ಬೆಳವಣಿಗೆಯಿಂದ ನೀರವ್ ಮೋದಿಗೆ ಮತ್ತೊಂದು ಭಾರೀ ಹೊಡೆತ ಬಿದ್ದಂತಾಗಿದೆ. ಮಹಾ ವಂಚಕನ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ಕಾನೂನು ಸಮರದಲ್ಲಿ ಇದು ಮತ್ತೊಂದು ಗೆಲುವಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ಕೋಟ್ಯಂತರ ರೂ. ಹಣ ವಂಚಿಸಿ ಲಂಡನ್‍ಗೆ ಪರಾರಿಯಾಗಿ ಈಗ ಅಲ್ಲಿನ ಜೈಲಿನಲ್ಲಿರುವ ನೀರವ್‍ನನ್ನು ಭಾರತಕ್ಕೆ ಕರೆತರುವ ಪ್ರಯತ್ನವನ್ನು ತೀವ್ರಗೊಳಿಸಿರುವ ಇಡಿ ಮತ್ತೊಂದೆಡೆ ಸ್ವಿಸ್ ಬ್ಯಾಂಕ್‍ಗಳಲ್ಲಿ ನೀರವ್ ಮತ್ತು ಆತನ ಕುಟುಂಬದವರು ಇರಿಸಿರುವ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸ್ವಿಸ್ ಬ್ಯಾಂಕ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಇಡಿ ಅಧಿಕಾರಿಗಳು ಸ್ವಿಟ್ಜರ್‍ಲ್ಯಾಂಡ್‍ನ ವಿವಿಧ ಬ್ಯಾಂಕ್‍ಗಳಲ್ಲಿ ನೀರವ್ ಮತ್ತು ಆತನ ಕುಟುಂಬದವರು ಇರಿಸಿರುವ ರಹಸ್ಯ ಠೇವಣಿಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಮನವಿ ಮಾಡಿದ್ದರು.

ಅದರಂತೆ ಸ್ವಿಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿ ಪಡೆದು ನೀರವ್ ಮತ್ತು ಪೂರ್ವಿ ಅವರ ಹೆಸರಿನಲ್ಲಿದ್ದ ಒಟ್ಟು 283 ಕೋಟಿ ರೂ.ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.