ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಪಿಜೆ ಆಯ್ಕೆಯಾದರೆ ಹೇಗೆ..?

T-B-Jayachandra--01

ತುಮಕೂರು, ಜೂ.28- ತುಮಕೂರು ಲೋಕಸಭಾ ಕ್ಷೇತ್ರದ ಮುಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಅವರು ಆಯ್ಕೆಯಾದರೆ ಹೇಗೆ? ಇದಕ್ಕೆ ನಿಮ್ಮ ಬೆಂಬಲ ಸೂಚಿಸಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ತಮ್ಮ ಫೇಸ್‍ಬುಕ್ ಅಕೌಂಟ್‍ನಲ್ಲಿ ಶೇರ್ ಮಾಡಿರುವ ವಿಷಯ ಕಾಂಗ್ರೆಸ್‍ನಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡರಿಗೆ 2019ರ ಲೋಕಸಭೆ ಚುನಾವಣೆ ಟಿಕೆಟ್ ಕೈ ತಪ್ಪಲಿದೆಯೇ? ಜಿಲ್ಲಾ ಕಾಂಗ್ರೆಸ್‍ಗೆ ಮುದ್ದಹನುಮೇಗೌಡರ ಸೇವೆ ಬೇಡವಾಗಿದೆಯೇ ಎಂಬಿತ್ಯಾದಿ ಚರ್ಚೆಗಳು ಪ್ರಾರಂಭವಾಗಿವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಟಿ.ಬಿ.ಜಯಚಂದ್ರ ಅವರು ಮುಂದಿನ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾದರೆ ಹೇಗೆ? ಅವರಿಗೆ ಬೆಂಬಲ ಸೂಚಿಸಿ ಎಂದು ಶೇರ್ ಮಾಡಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನಕ್ಕೆ ಸಂಸದರೇ ನೇರ ಕಾರಣ ಎಂಬ ಆಪಾದನೆ ಇದೆ. ಮುದ್ದಹನುಮೇಗೌಡರು ಜೆಡಿಎಸ್‍ಗೆ ಸಪೋರ್ಟ್ ಮಾಡುತ್ತಾರೆ ಎಂಬ ಆರೋಪವೂ ಇದೆ. ಹೀಗಾಗಿ ಮುಂದಿನ ಬಾರಿ ಮುದ್ದಹನುಮೇಗೌಡರಿಗೆ ಟಿಕೆಟ್ ಕೈ ತಪ್ಪಲಿದೆಯೇ? ಹಾಲಿ ಸಂಸದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಈ ರೀತಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂಬ ಬಗ್ಗೆಯೂ ಕೂಡ ಪರ-ವಿರೋಧದ ಚರ್ಚೆ ಕೂಡ ನಡೆದಿದೆ.

ಕೆಂಚಮಾರಯ್ಯ ವಿರುದ್ಧವೂ ಕೂಡ ಹಲವರು ಆಕ್ಷೇಪವೆತ್ತಿದ್ದಾರೆ. ಫೆಸ್‍ಬುಕ್ ಶೇರ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಂಚಮಾರಯ್ಯ, ನಾನು ಯಾವುದೇ ರೀತಿಯ ಸಾಮಾಜಿಕ ಜಾಲತಾಣ ಬಳಕೆ ಮಾಡುವುದಿಲ್ಲ. ಈ ರೀತಿಯ ಹೇಳಿಕೆ ಶೇರ್ ಆಗಿರುವುದು ನನಗೆ ಗೊತ್ತಿಲ್ಲ. ನನ್ನ ಅರಿವಿಗೆ ಬಾರದೆ ಫೇಕ್ ಅಕೌಂಟ್ ತರೆಯಲಾಗಿದ್ದು, ಅಂತಹವರ ವಿರುದ್ಧ ಸೈಬರ್ ಕ್ರೈಮ್‍ಗೆ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

Sri Raghav

Admin