ಪಾದಯಾತ್ರೆ ಹೆಸರಲ್ಲಿ ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದೆ ಕಾಂಗ್ರೆಸ್ : ಶರವಣ

Social Share

ಬೆಂಗಳೂರು, ಜ.10-ಕೋವಿಡ್ ಮಹಾಮಾರಿ ಮಿತಿ ಮೀರಿದ ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಮರೆತು, ಜನರ ಜೀವವನ್ನು ಪಣಕ್ಕಿಟ್ಟು ಪಾದಯಾತ್ರೆ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಎ. ಶರವಣ ಟೀಕಿಸಿದ್ದಾರೆ.
ಮೇಕೆದಾಟು ಯೋಜನೆಯ ನೆಪದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಕೋವಿಡ್ ಕಾಲ ಘಟ್ಟದ ಜೀವ ವಿರೋ ಪ್ರತಿಭಟನೆಯಾಗಿದ್ದು, ಜೀವಗಳ ಜೊತೆ ಚೆಲ್ಲಾಟ ಮಾಡುವ ರಾಜಕೀಯ ತಕ್ಷಣ ನಿಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.ಪ್ರಜಾಸತ್ತೆ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಅವರವರ ಹಕ್ಕು. ಸಂವಿಧಾನ ಈ ಹಕ್ಕು ನೀಡಿದೆ. ಆದರೆ ಇದೇ ಸಂವಿಧಾನ ಕೆಲವು ಕರ್ತವ್ಯ ಗಳನ್ನು ವಿಧಿಸಿದೆ.
ಕೊವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ, ನೀತಿ ನಿಯಮಗಳನ್ನು ಗಾಳಿಗೆ ತೂರಿರುವ ಬೇಜವಾಬ್ದಾರಿ ಪಕ್ಷ ಎಂಬುದನ್ನು ತೋರಿಸಿದೆ ಎಂದು ಕಿಡಿ ಕಾರಿದ್ದಾರೆ.
ಆಡಳಿತಾರೂಢ ಬಿಜೆಪಿ ಸರಕಾರ ಕೋವಿಡ್ ಗಂಭೀರ ಪರಿಸ್ಥಿತಿಯ ನಡುವೆ ಇಂಥ ಪಾದಯಾತ್ರೆ ನಡೆಸಲು ಅವಕಾಶ ನೀಡುವ ಮೂಲಕ ತಾನೊಂದು ದುರ್ಬಲ, ಅಸಹಾಯಕ ಸರಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ವ್ಯಂಗ್ಯವಾಡಿರುವ ಅವರು, ಹಾಡು ಹಗಲೇ, ಸಾವಿರಾರು ಪೊಲೀಸರ ಸಮ್ಮುಖದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಆದರೂ ಕ್ರಮಕೈಗೊಳ್ಳದ ಅಂಜುಬುರುಕ ಸರಕಾರ ಎಂದು ಗೇಲಿ ಮಾಡಿದ್ದಾರೆ.
ರಸ್ತೆಯಲ್ಲಿ ಹೋಗುವ ಬಡವರು, ಕೂಲಿ ಕಾರ್ಮಿಕರು ಮಾಸ್ಕ್ ಹಾಕದಿದ್ದರೆ ನೂರಾರು ರೂ. ಸುಲಿಗೆ ಮಾಡುವ ಪೊಲೀಸರು ಇಲ್ಲಿ ಮಾತ್ರ ಮೂಕ ಪ್ರೇಕ್ಷಕರಾಗಿರುವುದು ಆಶ್ಚರ್ಯಕರ ಎಂದಿದ್ದಾರೆ. ಈ ಪಾದಯಾತ್ರೆಯಿಂದ ಸಂಭವಿಸಲಿರುವ ಕೋವಿಡ್ ದುರಂತಕ್ಕೆ ಬಿಜೆಪಿ ಸರ್ಕಾರದ ನಿರ್ಲಕ್ಷ ಮತ್ತು ಕಾಂಗ್ರೆಸ್‍ನ ಬೇಜವಾಬ್ದಾರಿ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

Articles You Might Like

Share This Article