ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡುವ ಬಜೆಟ್ : ಟಿ.ಎ ಶರವಣ

Social Share

ಬೆಂಗಳೂರು,ಮಾ.4- ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಇಲಾಖಾ ವಾರು ವಿವರ ನೀಡದೇ ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡುವ ಬಜೆಟ್ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಟಿ.ಎ ಶರವಣ ಟೀಕಿಸಿದ್ದಾರೆ.
ರಾಜ್ಯದ ಸಮಗ್ರ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ವಿಸ್ತರಿಸದೇ, ಯಥಾಸ್ಥಿತಿ ವಾದವನ್ನು ಪ್ರತಿಪಾದಿಸುವ ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಎಂದು ಶರವಣ ಗೇಲಿ ಮಾಡಿದ್ದಾರೆ.
ಕೃಷಿ, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ, ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ. ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ಹೆಚ್ಚಿಸಿರುವ ಪಿಂಚಣಿ, ಏನೇನೂ ಸಾಲದಾಗಿದ್ದು, ಕನಿಷ್ಠ ಒಂದು ಸಾವಿರ ರೂಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಅವರಿಗೆ ಹೆಚ್ಚಿಸಿರುವ ಗೌರವ ಕೂಡ, ಅತ್ಯಂತ ಕಡಿಮೆಯಾಗಿದ್ದು, ಸರಾಸರಿ 2 ಸಾವಿರ ರೂ ಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅಲ್ಪ ಸಂಖ್ಯಾತರಿಗೆ ಈ ಬಜೆಟ್ ನಲ್ಲಿ, ಸಿಕ್ಕಿರುವುದು ಬರೀ ಶೂನ್ಯ ಮಾತ್ರ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ 2 ಯೋಜನೆಗಳ ವಿವಾಧ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ನಲ್ಲಿದ್ದು, ಅವು ಇತ್ಯರ್ಥವಾಗುವವರೆಗೆ ಹಣ, ಬಿಡುಗಡೆ ಮಾಡಬೇಕಿಲ್ಲ ಎಂದು ಗೊತ್ತಿದ್ದರೂ, ಬಜೆಟ್ ನಲ್ಲಿ ಹಣ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.
ಬಿ ಖಾತೆಯನ್ನು ಎ ಖಾತೆಯನ್ನಾಗಿ ಬದಲಾಯಿಸವು ಕೈಗೊಂಡಿರುವಂತ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದ್ರೇ ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಯು ಸರಳೀಕರಣಗೊಳಿಸುವಂತೆ ಅವರು ಸರ್ಕಾರಕ್ಕೆ ವಿನಂತಿಸಿದ್ದಾರೆ.
ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಸರ್ಕಾರದಿಂದ ಯಾವುದೇ ನೆರವು ಘೋಷಿಸಿಲ್ಲ ಎಂದು ವಿಷಾಧಿಸಿದ್ದಾರೆ.

Articles You Might Like

Share This Article