ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಸಿದ್ದವಿದೆ : ಶ್ರೀರಾಮುಲು

ಬಳ್ಳಾರಿ,ಮಾ.15- ಸಾರಿಗೆ ನೌಕರರ ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರ ಸಿದ್ದವಿದೆ. ಯಾವುದೇ ಕಾರಣಕ್ಕೂ ಪ್ರಯಾಣಿಕರಿಗೆ ತೊಂದರೆ ಕೊಟ್ಟು ಸಾರಿಗೆ ನೌಕರರು ಮುಷ್ಕರ ನಡೆಸಬಾರದು ಎಂದು ಸಚಿವ ಬಿ.ಶ್ರೀರಾಮುಲು ಮನವಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಸಾರಿಗೆ ನೌಕರರ ಸಂಘಗಳ ಮುಖಂಡರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಮೊದಲ ಹೆಜ್ಜೆಯಾಗಿ ವೇತನ ಪರಿಷ್ಕರಣೆ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದರು. ಶೇ.24ರಷ್ಟು ವೇತನವನ್ನು ಪರಿಷ್ಕರಣೆ ಮಾಡಬೇಕೆಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ. […]