ಕಾಬೂಲ್ ಏರ್ಪೋರ್ಟ್ ಸುತ್ತ ತಾಲಿಬಾನಿಗಳ ಭದ್ರಕೋಟೆ..!

ವಾಷಿಂಗ್ಟನ್,ಆ.26-ಕಾಬೂಲ್ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಪೆಂಟಗಾನ್ ಆರೋಪಿಸಿದೆ. ಆಫ್ಘಾನ್‍ನಲ್ಲಿರುವ ವಿದೇಶಿಗರು ತಮ್ಮ ತಮ್ಮ ದೇಶಗಳಿಗೆ ತೆರಳಲು ಇರುವ ಏಕೈಕ ವಿಮಾನ ನಿಲ್ದಾಣವೆಂದರೆ ಅದು ಕಾಬೂಲ್‍ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರ. ಆ ನಿಲ್ದಾಣವನ್ನು ವಶಕ್ಕೆ ತೆಗೆದುಕೊಳ್ಳಲು ತಾಲಿಬಾನಿಗಳು ಹರಸಾಹಸ ನಡೆಸುತ್ತಿದ್ದಾರೆ.

ಹೀಗಾಗಿ ನಿಲ್ದಾಣಕ್ಕೆ ತೆರಳುವ ವಿದೇಶಿಗರ ದಂಡನ್ನು ಚೆಕ್ ಪಾಯಿಂಟ್‍ಗಳಲ್ಲಿ ಪರಿಶೀಲನೆ ನಡೆಸಲು ತಾಲಿಬಾನಿಗಳು ತಮ್ಮದೆ ಆದ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ. ವಿದೇಶಗಳಿಗೆ ವಾಪಾಸಾಗುತ್ತಿರುವವರನ್ನು ಪರಿಶೀಲಿಸಿ ತಮಗೆ ಬೇಕಾದವರನ್ನು ವಾಪಸ್ ಕಳುಹಿಸಿ ಉಳಿದವರನ್ನು ಮಾತ್ರ ವಿಮಾನ ನಿಲ್ದಾಣಕ್ಕೆ ಬಿಡುತ್ತಿರುವುದರಿಂದ ದಿನೇ ದಿನೇ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಪೆಂಟಗಾನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.

ದೇಶ ತೊರೆಯುವವರು ಆ.31ರೊಳಗೆ ಕಾಬೂಲ್ ವಿಮಾನ ನಿಲ್ದಾಣದ ಮೂಲಕ ತಮ್ಮ ದೇಶಗಳಿಗೆ ತೆರಳಬೇಕು ನಂತರದ ಬೆಳವಣಿಗೆಗಳಿಗೆ ನಾವು ಹೊಣೆಗಾರರಲ್ಲ ಎಂದು ಅವರು ಎಚ್ಚರಿಸಿದ್ದಾರೆ.