ದಾವಣಗೆರೆ,ಫೆ.3- ಈ ಪುಟ್ಟ ಬಾಲಕಿ 26 ತರಹೇವಾರಿ ರೋಗಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಯಾವ ರೀತಿಯ ಔಷಧ ನೀಡಬೇಕು ಎಂದು ಅರಳು ಹುರಿದಂತೆ ಪಟ ಪಟಾ ಅಂತ ಹೇಳ್ತಾಳೆ. ಜಿಲ್ಲಾಯ ಜಗಳೂರು ಪಟ್ಟಣದ ನಿವಾಸಿ ಡಾ.ಚೇತನ್ ಹಾಗೂ ವಸುಧಾ ದಂಪತಿಯ ಏಕೈಕ ಪುತ್ರಿ ತನಸ್ವಿ.
ಡಾ.ಚೇತನ್ ತಮ್ಮ ರೋಗಿಗಳಿಗೆ ನೀಡುತ್ತಿದ್ದ ವೈದ್ಯರ ಔಷಧಿ ಚೀಟಿ ಕೇಳುತ್ತಾ ಬೆಳೆದ ತನಸ್ವಿಗೆ ಎಲ್ಲವೂ ಮನಸ್ಸಿನಲ್ಲಿ ಅಚ್ಚೊತ್ತಿವೆ. ಅವಳಿಗೆ ಇನ್ನೂ ಆರು ವರ್ಷ ಪೂರ್ಣವಾಗಿಲ್ಲ. 26 ವಿವಿಧ ರೋಗಗಳಿಗೆ ಆಯುರ್ವೇದಿಕ್ ಔಷಧೋಪಚಾರವನ್ನು ಪಟಪಟಾ ಅಂತಾ ಹೇಳ್ತಾಳೆ. ಒಮ್ಮೆ ಕೇಳಿಕೊಟ್ಟ ಔಷಧದ ಬಗ್ಗೆ ತಿಳಿದುಕೊಳ್ಳುವ ಈ ಪೋರಿ, ಅದನ್ನೇ ನೆನಪಿನಲ್ಲಿಟ್ಟುಕೊಂಡು ಪುನರಾವರ್ತಿಸುವ ಅದ್ಭುತ ಜಾಣ್ಮೆ ಇದೆ. ಈ ಚಿಕ್ಕ ಪ್ರತಿಭೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸೇರಿದ್ದಾಳೆ.
ಗ್ಯಾಸ್ಟ್ರಿಕ್, ಮೂಲವ್ಯಾದಿ, ಹೃದಯರೋಗ, ರಕ್ತದೊತ್ತಡ, ಗರ್ಭಶಯದಲ್ಲಿ ಗಡ್ಡೆ, ಮೂಗಲ್ಲಿ ದುರ್ಮಾಂಸ, ಕರೊನಾ, ಕೀಲು ನೋವು, ವೆರಿಕೋಸ್ ವೇನ್ಸ್, ಮಧುಮೇಹ, ಡೇಂಘಿ, ಥೈರಾಯ್ಡ ಸೇರಿದಂತೆ ಸುಮಾರು 26 ರೋಗಗಳಿಗೆ ಆಯುರ್ವೇದ ಔಷಧೊಚಾರವನ್ನು ಅರಳು ಹುರಿದಂತೆ ಹೇಳುತ್ತಿರುವ ಈ ಪ್ರತಿಭಾವಂತ ಬಾಲೆ.
ಜ್ಞಾಪಕಶಕ್ತಿ ಹೊಂದಿರುವ ಬಾಲೆ ತನಸ್ವಿ. ಸಂಸ್ಕೃತದಲ್ಲಿ ಏಕಪಾಠಿ ಅಂತಾರ ಲ್ಲಾ ಹಾಗೇ ಒಮ್ಮೆ ಹೇಳಿದ್ರೆ ಸಾಕು ಜ್ಞಾಪಕದಲ್ಲಿಷ್ಟುಕೊಂಡು ರಿಪೀಟ್ ಮಾಡ್ತಾಳೆ. ಬಾಲ್ಯದಿಂದಲೂ ಅದ್ಭುತವಾದ ಗಮನಿಸುವ ಹಾಗೂ ಗ್ರಹಿಸುವ ಶಕ್ತಿ ಹೊಂದಿದ್ದಾಳೆ ತನಸ್ವಿ.
ಇವರ ಕುಟುಂಬದಲ್ಲಿ ಬಹುತೇಕರು ಆಯುರ್ವೇದ ಹಾಗೂ ಅಲೋಪತಿ ವೈದ್ಯರಿದ್ದಾರೆ. ವೈದ್ಯರಿರುವ ವಾತಾವರಣದಲ್ಲಿ ಬೆಳೆದ ತನಸ್ವಿ ಸಣ್ಣ ವಯಸ್ಸಿನಲ್ಲಿ ಪ್ರತಿಭಾವಂತೆ ಎನಿಸಿಕೊಂಡಿದ್ದಾಳೆ. ಎಲ್ಲರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ತಂದೆ-ತಾಯಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದೇ ದಿಕ್ಕಿನಲ್ಲಿ ಅವರನ್ನು ಬೆಳೆಸಿ, ಪ್ರೋತ್ಸಾಹಿಸಿದರೆ ಖಂಡಿತ ಎಲ್ಲ ಮಕ್ಕಳ ಪ್ರತಿಭೆಯೂ ಅರಳುತ್ತದೆ.
