ತಾಂಜೇನಿಯಾ ಮೂಲದ ಡ್ರಗ್ ಪೆಡ್ಲರ್ ಸೆರೆ,15 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತು ವಶ

Spread the love

ಬೆಂಗಳೂರು, ಮೇ 20- ವಿದ್ಯಾರ್ಥಿ ವೀಸಾಪಡೆದು ಭಾರತಕ್ಕೆ ಬಂದು ನಗರದಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ತಾಂಜೇನಿಯಾ ದೇಶದ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರ 15 ಲಕ್ಷ ರೂ ಮೌಲ್ಯದ ನಿಷೇಧಿತ ಮಾದಕ ವಸ್ತು 150 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆರೋಪಿಯು ಮೂಲತಃ ತಾಂಜೇನಿಯಾ ದೇಶದವನಾಗಿದ್ದು, ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದು ನಂತರ ಬೆಂಗಳೂರಿನ ಖಾಸಗಿ ಕಾಲೇಜಿಗೆ ಬಿಕಾಂ ವ್ಯಾಸಂಗಕ್ಕೆ ಸೇರಿಕೊಂಡಿದ್ದನು.

ತನ್ನ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣಗಳಿಸುವ ದುರುದ್ದೇಶದಿಂದ ಮುಂಬೈನಿಂದ ಕಡಿಮೆ ಬೆಲೆಗೆ ಎಂಡಿಎಂಎ ಕ್ರಿಸ್ಟಿಲ್‍ನ್ನು 8 ಸಾವಿರದಿಂದ 10 ಸಾವಿರ ರೂ.ಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿದ್ದುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ.

ಆರೋಪಿಯು ಮಾದಕ ವಸ್ತುಗಳ ಮಾರಾಟ/ ಸಾಗಾಟ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿರುತ್ತಾರೆ.

Facebook Comments