ನಾಲಿಗೆ ಹರಿಬಿಟ್ಟು ಕುರ್ಚಿಗೆ ಕುತ್ತು ತಂದುಕೊಂಡ ತೇಜಸ್ವಿ ಸೂರ್ಯ

Social Share

ಬೆಂಗಳೂರು,ಆ.1- ಸರ್ಕಾರ ಹಾಗೂ ಪಕ್ಷಕ್ಕೆ ಭಾರೀ ಮುಜುಗರ ಸೃಷ್ಟಿಸಿರುವ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರನ್ನು ಬದಲಾವಣೆ ಮಾಡುವ ಸಂಭವವಿದೆ.

ದಕ್ಷಿಣಕನ್ನಡ ಜಿಲ್ಲೆ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನಟ್ಟಾರ್ ಕೊಲೆಯಾದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರೊಂದಿಗೆ ತೇಜಸ್ವಿ ಸೂರ್ಯ ದೂರವಾಣಿಯಲ್ಲಿ ಮಾತನಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್ ಸರ್ಕಾರ ಇದ್ದರೆ ನಾವು ಕಲ್ಲುಗಳನ್ನು ಎಸೆಯಬಹುದಿತ್ತು. ಆದರೆ ನಮ್ಮದೇ ಸರ್ಕಾರ. ನಾವು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತೇಜಸ್ವಿ ಸೂರ್ಯ ಕಾರ್ಯಕರ್ತರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಹೇಳಿದ ಈ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದ ಸೃಷ್ಟಿಸಿತ್ತು.

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರೊಬ್ಬರ ಈ ಹೇಳಿಕೆ ಅವರ ಸ್ಥಾನಮಾನಕ್ಕೆ ತಕ್ಕದಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಿತ್ತು. ಅವರ ಹೇಳಿಕೆಯಿಂದ ಸರ್ಕಾರ ಮತ್ತು ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ. ಹೀಗಾಗಿ ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಭಜರಂಗದಳದ ಕಾರ್ಯಕರ್ತ ಹರ್ಷ, ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ನಂತರ ಕರ್ನಾಟಕ ಸೇರಿದಂತೆ ಅನೇಕ ಕಡೆ ಬಿಜೆಪಿಯ ಯುವ ಕಾರ್ಯಕರ್ತರು ಸಾಲು ಸಾಲಾಗಿ ರಾಜೀನಾಮೆ ಕೊಡುತ್ತಿದ್ದಾರೆ. ಅವರ ಮನವೊಲಿಸುವ ಬದಲು ಈ ರೀತಿ ಹೇಳಬೇಕಾದ ಅಗತ್ಯವಿರಲಿಲ್ಲ ಎಂದು ವರಿಷ್ಠರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರು ಹಾಗೂ ತೇಜಸ್ವಿ ಸೂರ್ಯ ನಡುವೆ ಸಮನ್ವಯ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ. ಕಾರ್ಯಕರ್ತರ ಮೇಲೆ ಹಲ್ಲೆ ಇಲ್ಲವೆ ಹತ್ಯೆ ಪ್ರಕರಣಗಳು ನಡೆದಾಗ ಕುಟುಂಬದವರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಮಾತನಾಡಬೇಕೆ ಹೊರತು ಇಂತಹ ಸಂದರ್ಭದಲ್ಲಿ ನಾಲಿಗೆ ಹರಿಬಿಡಬೇಕಾದ ಅಗತ್ಯವಿರಲಿಲ್ಲ ಎಂದು ಸ್ವತಃ ನಡ್ಡಾ ಮತ್ತು ಅಮಿತ್ ಷಾ ಅವರೇ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗ ತೇಜಸ್ವಿ ಸೂರ್ಯ ಅವರನ್ನು ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿ ಸಂಘ ಪರಿವಾರ, ಆರ್‍ಎಸ್‍ಎಸ್ ಜೊತೆ ಸಮನ್ವಯ ಸಾಸುವ ಯುವ ನಾಯಕನಿಗ ಪಟ್ಟ ಕಟ್ಟಲು ದೆಹಲಿ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.

Articles You Might Like

Share This Article