ಮಧ್ಯರಾತ್ರಿ ಧಗಧಗಿಸಿದ ಮನೆ, ಒಂದೇ ಕುಟುಂಬದ 6 ಮಂದಿ ಸಜೀವ ದಹನ

Social Share

ಹೈದರಾಬಾದ್,ಡಿ.17- ಮಧ್ಯರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಗಾಢನಿದ್ರೆಯಲ್ಲಿದ್ದ ಕುಟುಂಬವೊಂದರ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸದಸ್ಯರು ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮ ಕಂದಾಯ ಸಹಾಯಕ ಮಸುಶಿವಯ್ಯ (50) ಅವರ ಪತ್ನಿ ಪದ್ಮ (45), ಪದ್ಮ ಅವರ ಅಕ್ಕನ ಮಗಳು ಮೌನಿಕಾ (23) ಆಕೆಯ ಇಬ್ಬರು ಹೆಣ್ಣು ಮಕ್ಕಳಾದ ಹಿಮಬಿಂಧು, ಸ್ವೀಟಿ, ಸಂಬಂಧಿಕರಾದ ಶಾಂತಯ್ಯ ಸಜೀವಂತ ದಹನವಾಗಿದ್ದಾರೆ.

ರಾಮಕೃಷ್ಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಮನೆ ಬೆಂಕಿಯ ಕೆನ್ನಾಲಿಗೆಗಳಿಂದ ಉರಿಯುತ್ತಿರುವುದನ್ನು ಅಕ್ಕಪಕ್ಕದವರು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳ ಸ್ಥಳಕ್ಕಾಗಮಿಸಿದೆ. ಆ ವೇಳೆಗಾಗಲೇ ಇಡೀ ಮನೆ ಸಂಪೂರ್ಣ ಭಸ್ಮವಾಗಿದೆ. ಬೆಂಕಿ ನಂದಿಸಿ ಪರಿಶೀಲನೆ ನಡೆಸಿದಾಗ ಆರು ಮಂದಿ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ.

CBI ಮತ್ತು ದೆಹಲಿ ಪೊಲೀಸರಿಗೆ ಧನ್ಯವಾದ ಹೇಳಿದ ಅಮೆರಿಕದ FBI

ಆ ಮನೆಯಲ್ಲಿ ಶಿವಯ್ಯ ಮತ್ತು ಪದ್ಮ ವಾಸವಿದ್ದರು. ಕಳೆದೆರಡು ದಿನಗಳ ಹಿಂದೆ ಮೌನಿಕಾ, ಆಕೆಯ ಮಕ್ಕಳು ಮತ್ತು ಸಂಬಂಧಿಕರು ಆಗಮಿಸಿದ್ದರು. ಬೆಂಕಿ ಹತ್ತಿದಾಗ ಎಲ್ಲರೂ ಮನೆಯಲ್ಲಿದ್ದು ಮೃತಪಟ್ಟಿದ್ದಾರೆ ಎಂದು ಮಂಚೇರಿಯಲ್ ವಿಭಾಗದ ಎಸಿಪಿ ತಿರುಪತಿರೆಡ್ಡಿ ತಿಳಿಸಿದ್ದಾರೆ.

ಬೆಂಕಿ ಅನಾಹುತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಬೆಂಕಿಗೆ ಕಾರಣವಾಗಿರುವ ಅಂಶಗಳು ಅನುಮಾನಸ್ಪದವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಅಖಿಲ್ ಮಹಾಜನ್ ತಿಳಿಸಿದ್ದಾರೆ.

ಬೆಂಕಿಯಿಂದ ಮನೆ ಹೊತ್ತಿ ಉರಿಯುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ದೃಶ್ಯ ಭೀಕರವಾಗಿದ್ದು, ಎದೆ ನಡುಗಿಸುವಂತಿದೆ. ಬಹುತೇಕ ಮರದ ವಸ್ತುಗಳನ್ನು ಬಳಸಿ ನಿರ್ಮಿಸಿದ್ದರಿಂದ ಮನೆ ಬೆಂಕಿಯಿಂದ ಬೂದಿಯಾಗಿ ಹೋಗಿದೆ.

#Telangana, #2children, 6killed, #catchesfire, #policesuspect, #deliberateact,

Articles You Might Like

Share This Article