ಯುದ್ಧ ನಿಲ್ಲಿಸುವಂತೆ ಪುಟಿನ್ ಮೇಲೆ ಒತ್ತಡ ಹೇರಲು ಭಾರತಕ್ಕೆ ಉಕ್ರೇನ್ ಒತ್ತಾಯ

Social Share

ಕ್ಯಿವ್,ಮಾ.6- ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳ ಹಿತಾಸಕ್ತಿಗಾಗಿ ಯುದ್ಧವನ್ನು ತಕ್ಷಣ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ಪುಟೀನ್ ಮೇಲೆ ಒತ್ತಡ ಹೇರಬೇಕೆಂದು ಉಕ್ರೇನ್ ಒತ್ತಾಯಿಸಿದೆ. ಉಕ್ರೇನ್‍ನ ವಿದೇಶಾಂಗ ಸಚಿವ ಡ್ಯಾಂಪ್ರೋಕುಲೇಬ್ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿದ್ದು, ಈ ಯುದ್ಧದಿಂದ ಬಹಳಷ್ಟು ದೇಶಗಳು ತೊಂದರೆ ಅನುಭವಿಸಲಿದೆ ಎಂದು ಎಚ್ಚರಿಸಿದ್ದಾರೆ.
ವಿಶೇಷವಾಗಿ ಭಾರತ ಉಕ್ರೇನ್‍ನ ಕೃಷಿ ಉತ್ಪನ್ನಗಳ ಬಹುದೊಡ್ಡ ಗ್ರಾಹಕ. ಒಂದು ವೇಳೆ ಯುದ್ಧ ಮುಂದುವರೆದಿದ್ದೆಯಾದರೆ ನಮಗಿಲ್ಲಿ ಬಿತ್ತನೆ ಮಾಡಲು ಕೃಷಿ ಉತ್ಪನ್ನಗಳನ್ನು ಬೆಳೆಯಲು ಕಷ್ಟವಾಗಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರತದ ಆಹಾರ ಭದ್ರತೆಗೆ ಧಕ್ಕೆಯಾಗಲಿದೆ. ವಿಶ್ವದ ಹಲವು ರಾಷ್ಟ್ರಗಳು ಆಹಾರೋತ್ಪನ್ನಗಳ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಲ್ಲ ರಾಷ್ಟ್ರಗಳ ಹಿತದೃಷ್ಟಿಯಿಂದಾಗಿ ಯುದ್ಧ ನಿಲ್ಲಿಸುವುದು ಅನಿವಾರ್ಯವಾಗಿದೆ. ಪುಟೀನ್ ಅವರೊಂದಿಗೆ ಉತ್ತಮ ಸಂಬಂಧವನ್ನು ಸಂಭ್ರಮಿಸುತ್ತಿರುವ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಯುದ್ದವನ್ನು ತಡೆಯಲು ಮುಂದಾಗಬೇಕು. ಆಕ್ರಮಣವನ್ನು ನಿಲ್ಲಿಸುವಂತೆ ಪುಟೀನ್ ಅವರಿಗೆ ತಾಕೀತು ಮಾಡಬೇಕು ಎಂದು ಮನವಿ ಮಾಡಿದೆ.
ಯುದ್ಧವನ್ನು ಮುಂದುವರೆಸಿದ್ದೇ ಆದರೆ ರಷ್ಯಾದ ಮೇಲೆ ಹೊಸ ನಿರ್ಬಂಧವನ್ನು ಹೇರಬೇಕು. ಆಕ್ರಮಣಕಾರಿ ಮನೋವೃತ್ತಿಯಿಂದ ಕದನ ವಿರಾಮ ಉಲ್ಲಂಘಿಸಿ ರಷ್ಯಾ ನೆರೆಯ ಗಡಿಭಾಗದಲ್ಲಿ ನಾಗರಿಕರನ್ನು ಹಾಗೂ ವಿದೇಶಿಗರನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಳೆದ 30 ವರ್ಷಗಳಿಂದ ಆಫ್ರಿಕಾ, ಏಷ್ಯಾ ಸೇರಿದಂತೆ ವಿವಿಧ ಖಂಡಗಳ ವಿದ್ಯಾರ್ಥಿಗನ್ನು ಉಕ್ರೇನ್ ಸ್ವಾಗತಿಸಿತ್ತು. ಅವರು ಬಂದು ಶಿಕ್ಷಣ ಪಡೆದು ಹೋಗಲು ಮುಕ್ತ ಅವಕಾಶ ನೀಡಿತ್ತು. ಯುದ್ಧ ಘೋಷಣೆಯಾದ ನಂತರ ವಿದೇಶಿಗರು ಸುರಕ್ಷಿತವಾಗಿ ಹೊರಹೋಗಲು ರೈಲುಗಳ ವ್ಯವಸ್ಥೆ ಮಾಡಿತ್ತು. ಅವರ ಸಹಾಯಕ್ಕಾಗಿ ವಿಶೇಷ ಸಹಾಯವಾಣಿ ಒದಗಿಸಲಾಗಿತ್ತು.
ರಾಯಭಾರ ಕಚೇರಿಯ ಜೊತೆ ನಿಂತು ಸುರಕ್ಷಿತವಾಗಿ ವಿದೇಶಿಗರನ್ನು ಕಳುಹಿಸಿಕೊಡಲಾಗಿದೆ. ಉಕ್ರೇನ್ ಸರ್ಕಾರ ತನ್ನ ಮಿತಿಯಲ್ಲಿ ಗರಿಷ್ಠ ಪ್ರಮಾಣದ ಒಳ್ಳೆಯ ಕೆಲಸ ಮಾಡಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Articles You Might Like

Share This Article