ದೇವಾಲಯ ಸ್ವತಂತ್ರಗೊಳಿಸುವ ಕಾಯ್ದೆ ಹಿಂಪಡೆಯಲು ಅರ್ಚಕರ ನಿಯೋಗ ಒತ್ತಾಯ

Social Share

ಬೆಂಗಳೂರು, ಜ.7- ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸಲು ರಾಜ್ಯ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯದ ಅರ್ಚಕರ -ಆಗಮಿಕರ ಮತ್ತು ಉಪಾವಂತರ ಒಕ್ಕೂಟ ಮನವಿ ಮಾಡಿದೆ.
ಒಕ್ಕೂಟದ ಗೌರವಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅವರ ನಿಯೋಗವು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಕಾಯ್ದೆಯು ಅನುಕೂಲಕ್ಕಿಂತ ಅನಾನುಕೂಲವನ್ನು ಸೃಷ್ಟಿಸಲಿದೆ. ಈ ಕಾಯ್ದೆಯನ್ನು ಜಾರಿಗೊಳಿಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎಂದು ನಿಯೋಗವು ಮನವಿ ಮಾಡಿತು.
ರಾಜ್ಯದ ಅನೇಕ ದೇವಾಲಯ ಗಳು ಈಗಲೂ ಆರ್ಥಿಕ ದುಸ್ಥಿತಿಗೆ ಸಿಲುಕಿದೆ. ಪ್ರಸ್ತುತ ಅರ್ಚಕರು ಹೇಗೋ ನಿಭಾಯಿಸಿಕೊಂಡು ದೇವಸ್ಥಾನಗಳನ್ನು ಮುನ್ನಡೆಸುತ್ತಿದ್ದಾರೆ. ಕಾಯ್ದೆ ಜಾರಿಯಾದರೆ ಅನೇಕ ಅರ್ಚಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೆಲವೊಂದು ಸಂಘಸಂಸ್ಥೆಗಳಿಗೆ ದೇವಸ್ಥಾನಗಳನ್ನು ಹಸ್ತಾಂತರ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ಕಾಯ್ದೆಯನ್ನು ಜಾರಿ ಮಾಡಲು ಹೊರಟಿದೆ. ಈಗಾಗಲೇ ಅನೇಕ ಕಡೆ ಆಡಳಿತ ಮಂಡಳಿ ಮತ್ತು ಸಂಘಸಂಸ್ಥೆಗಳ ನಡುವೆ ಸಂಘರ್ಷ ನಡೆದಿದೆ ಎಂಬುದನ್ನು ನಿಯೋಗವು ಶಿವಕುಮಾರ್ ಅವರಿಗೆ ಮನವರಿಕೆ ಮಾಡಿತ್ತು.
ದೇವಾಲಯಕ್ಕೆ ಬರುವ ಆದಾಯದಲ್ಲಿ ದೇವಾಲಯದ ಅಭಿವೃದ್ಧಿ ಬದಲಿಗೆ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುವ ಸಾಧ್ಯತೆಗಳಿವೆ. ಮುಂದಿನ ಅವೇಶನದ ವೇಳೆ ಸದನದಲ್ಲಿ ಈ ಬಗ್ಗೆ ಸರ್ಕಾರದ ಗಮನಸೆಳೆಯುವಂತೆ ಮನವರಿಕೆ ಮಾಡಿಕೊಟ್ಟರು.
ನಿಯೋಗದ ಮನವಿಯನ್ನು ಪಾಲಿಸಿದ ಶಿವಕುಮಾರ್ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಜೊತೆ ಚರ್ಚಿಸಿ, ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು.

Articles You Might Like

Share This Article