ಮೇ.9ರಂದು ಮೈಕ್‍ನಲ್ಲಿ ದೇವಾಲಯಗಳ ಭಜನೆ : ಪ್ರಮೋದ್ ಮುತಾಲಿಕ್ ಕರೆ

ಬೆಂಗಳೂರು, ಏ.21- ರಾಜ್ಯದಲ್ಲಿ ಅಜಾನ್ ವಿರುದ್ಧ ತಿರುಗಿ ಬಿದ್ದಿರುವ ಹಿಂದೂಪರ ಸಂಘಟನೆಗಳು ಮೇ 9ರಂದು ದೇವಾಲಯಗಳು ಹಾಗೂ ಮಠಗಳಲ್ಲಿ ಮೈಕ್ ಹಾಕಿ ಭಜನೆ, ಶ್ಲೋಕ ಹೇಳುವಂತೆ ಕರೆ ನೀಡಿವೆ. ಮೇ 9ರಂದು ಬೆಳಗ್ಗೆ 5 ಗಂಟೆಗೆ ದೇವಾಲಯ, ಮಠಗಳಲ್ಲಿ ಮೈಕ್ ಮೂಲಕ ಭಜನೆ, ಹನುಮಾನ್ ಚಾಲೀಸಾ ಪಠಿಸುವಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ರಾಜ್ಯದ ಸುಮಾರು ನೂರು ದೇವಸ್ಥಾನ ಹಾಗೂ ಮಠಗಳಲ್ಲಿ ಮೇ 9ರಂದು ಬೆಳಗ್ಗೆ 5 ಗಂಟೆಗೆ ಮೈಕ್‍ನಲ್ಲಿ ಭಜನೆ, ಹನುಮಾನ್ ಚಾಲೀಸಾ ಪಠಿಸುವಂತೆ ಎಲ್ಲ ದೇವಾಲಯಗಳ ಆಡಳಿತ ಮಂಡಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ದೇವಾಲಯಗಳಲ್ಲಿ ಮೈಕ್‍ನಲ್ಲಿ ಭಜನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನಮ್ಮ ಈ ನಿರ್ಧಾರವನ್ನು ತಡೆಯಲು ಸರ್ಕಾರ ಪ್ರಯತ್ನಿಸಿದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಪ್ರಾರ್ಥನಾ ಮಂದಿರಗಳಲ್ಲಿ ಹಾಕಿರುವ ಮೈಕ್ ತೆಗೆಸುವಂತೆ ಸುಪ್ರೀಂಕೋರ್ಟ್ ಆದೇಶವಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ನಮ್ಮ ಈ ಹೋರಾಟ ಕೈಬಿಡಬೇಕಾದರೆ ಆಡಳಿತ ನಡೆಸುತ್ತಿರುವವರು ಪ್ರಾರ್ಥನಾ ಮಂದಿರಗಳಲ್ಲಿ ಹಾಕಿರುವ ಮೈಕ್‍ಗಳನ್ನು ತೆಗೆಸಬೇಕು ಎಂದು ಅವರು ಆಗ್ರಹಿಸಿದರು.

ನಾಳೆಯಿಂದ ನಮ್ಮ ಶ್ರೀರಾಮಸೇನೆ ಕಾರ್ಯಕರ್ತರು ಜಿಲ್ಲಾ ಕೇಂದ್ರಗಳಲ್ಲಿ ಜನಜಾಗೃತಿ ಹಮ್ಮಿಕೊಂಡು ಮೇ 9ರಿಂದ ದೇವಾಲಯಗಳಲ್ಲಿ ಹಾಗೂ ಮಠಗಳಲ್ಲಿ ಬೆಳಗ್ಗೆ ಭಜನೆ ಮತ್ತು ಹನುಮಾನ್ ಚಾಲೀಸಾ ಪಠಣೆ ಮಾಡುವಂತೆ ಮನವೊಲಿಸುವ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.