ಟೆಂಡರ್ ಕರೆಯದೇ ಪೇ ಅಂಡ್ ಯೂಸ್ ಟಾಯ್ಲೆಟ್ ನಿರ್ಮಾಣಕ್ಕೆ ಅನುಮತಿಸಿದ ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು, ಸೆ.11- ಟೆಂಡರ್ ಕರೆಯದೆಯೇ ಪಾವತಿಸಿ ಉಪಯೋಗಿಸುವ ಶೌಚಾಲಯಗಳನ್ನು ನಿರ್ಮಾಣ ಮಾಡಲು ಅನುಮತಿ ಕೊಟ್ಟ ಎಂಜಿನಿಯರ್‍ಗಳಿಗೆ ಕೂಡಲೆ ನೋಟಿಸ್ ನೀಡುವಂತೆ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಲ್ಲೇಶ್ವರಂ ವಲಯ ಕಚೇರಿಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪೇ ಅಂಡ್ ಯೂಸ್ (ಪಾವತಿಸಿ ಉಪಯೋಗಿಸಿ) ಶೌಚಾಲಯಗಳು ಮತ್ತು ಘನತ್ಯಾಜ್ಯ ಘಟಕಗಳಿಗೆ ಜಗದೀಶ್ ಹಿರೇಮನಿ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.

ಈ ವೇಳೆ ಶೌಚಾಲಯಗಳ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ ಸಮರ್ಪಕವಾಗಿಲ್ಲದ ಶೌಚಾಲಯಗಳಿಗೆ ಬೀಗ ಹಾಕಿಸಿದರು. ಗಾಂಧಿನಗರ ವಾರ್ಡ್ ಸಿರೂರ್ ಪಾರ್ಕ್ ರಸ್ತೆಯಲ್ಲಿರುವ ಪಾವತಿಸಿ ಉಪಯೋಗಿಸುವ ಸಾರ್ವಜನಿಕ ಶೌಚಾಲಯ ಪರಿಶೀಲಿಸಿ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಎಷ್ಟು ವೇತನವಿದೆ, ಪಿಎಫ್, ಇಎಸ್‍ಐ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಶೌಚಾಲಯ ಮುಂಭಾಗ ದರ ಪಟ್ಟಿ ಅಳವಡಿಸದೆ ಇರುವುದನ್ನು ಕಂಡು ಕೂಡಲೆ ದರ ಪಟ್ಟಿ ಅಳವಡಿಸುವಂತೆ ಸೂಚನೆ ನೀಡಿದರು. ಬಳಿಕ ಸೆಂಟ್ರಲ್ ವೃತ್ತದಲ್ಲಿರುವ ಶೌಚಾಲಯ ತಪಾಸಣೆ ನಡೆಸಿದ ಅವರು, ಪಾಲಿಕೆ ಕಾರ್ಯಪಾಲಕ ಅಭಿಯಂತರರು ಟೆಂಡರ್ ಕರೆಯದೆ ಶೌಚಾಲಯ ನಿರ್ಮಿಸಲು ಅನುಮತಿ ಕೊಟ್ಟಿರುವುದು ತಿಳಿದು ಸ್ಥಳದಲ್ಲಾ ಶೌಚಾಲಯಕ್ಕೆ ಬೀಗ ಹಾಕಿಸಿದರು. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಬೇಕು. ಶೌಚಾಲಯ ನಿರ್ವಹಣೆ ಮಾಡುವವರಿಗೂ ನೋಟೀಸ್ ಜಾರಿ ಮಾಡುವಂತೆ ಆದೇಶಿಸಿದರು.

ತದನಂತರ ಸಂಪಿಗೆ ರಸ್ತೆ, ಮಲ್ಲಾಶ್ವರಂ ಆಟದ ಮೈದಾನ, ಪ್ರಕಾಶ್ ನಗರ ವಾರ್ಡ್‍ನ ಗಾಯಿತ್ರಿ ದೇವಿ ಉದ್ಯಾನವನ, ರಾಜಾಜಿನಗರದಲ್ಲಿರುವ ಪಾವತಿಸಿ ಉಪಯೋಗಿಸಿ ಶೌಚಾಲಯಗಳನ್ನು ಪರಿಶೀಲಿಸಿದರು.

ಶೌಚಾಲಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಿರೇಮನಿ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 530 ಪಾಲಿಕೆ ಹಾಗೂ 150 ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ)ದ ಸುಲಭ ಶೌಚಾಲಯಗಳಿವೆ. ಎಲ್ಲಾ ಶೌಚಾಲಯಗಳನ್ನೂ ಹೊರರಾಜ್ಯದವರೇ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.

ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಲ್ಲ, ದರ ಪಟ್ಟಿ ಅಳವಡಿಸಿಲ್ಲ, ಟೆಂಡರ್ ಕರೆಯದೆ ಶೌಚಾಲಯ ನಿರ್ಮಿಸಲಾಗಿದೆ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ. ಕೆಲಸ ಮಾಡುವ ಸಿಬ್ಬಂದಿ ಸುರಕ್ಷಾ ಕವಚಗಳನ್ನು ಧರಿಸಿಲ್ಲ, ಸಿಬ್ಬಂದಿ ಶೌಚಾಲಯದಲ್ಲಾ ನೆಲೆಸಿ ಅ¯್ಲಲ್ಲಾ ಅಡುಗೆ ಮಾಡಿಕೊಂಡು ಅಲ್ಲಾ ಮಲಗುತ್ತಾರೆ. ಸ್ಥಳೀಯ ಸಫಾಯಿ ಕರ್ಮಚಾರಿ ಅವಲಂಬಿತರಿಗೆ ಉದ್ಯೋಗ ಕೊಟ್ಟಿಲ್ಲ.

ಈ ಸಂಬಂಧ ನಾಳೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಮಾಲೀಕರನ್ನು ಕರೆಸಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.