ಮಂಗಳೂರು, ಜು.28- ಉದ್ವಿಗ್ನಗೊಂಡಿದ್ದ ಕರಾವಳಿ ಭಾಗ ಈಗ ಶಾಂತವಾಗಿದೆ. ಎಲ್ಲೆಡೆ ನೀರವ ಮೌನ ಆವರಿಸಿದೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ನಂತರ ವ್ಯಾಪಕ ಪ್ರತಿಭಟನೆಗಳು ನಡೆದು ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು. ಪೊಲೀಸರ ಸರ್ಪಗಾವಲಿನ ನಡುವೆ ನಿನ್ನೆ ಅಂತ್ಯಕ್ರಿಯೆಯೂ ನಡೆದಿದ್ದು, ಪುತ್ತೂರು, ಸುಳ್ಯ, ಬೆಳ್ಳಾರೆ ಸೇರಿದಂತೆ ಹಲವು ಭಾಗಗಳಲ್ಲಿ ಶಾಂತ ಪರಿಸ್ಥಿತಿ ಇದೆ.
ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿರುವುದರಿಂದ ಹಿಂದೂಪರ ಸಂಘಟನೆಗಳ ಕೋಪದ ಕಟ್ಟೆಯೊಡೆದಿದ್ದು, ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಈ ಬಾರಿ ಸಹಿಸಲು ಸಾಧ್ಯವಿಲ್ಲ. ನಮ್ಮವರ ರಕ್ಷಣೆ ಮಾಡಲು ಸಾಧ್ಯವಾಗದ ಮೇಲೆ ನಮ್ಮ ನಾಯಕರು ಏನು ಮಾಡುತ್ತಾರೆ ಎಂದು ಕೆಲವರು ಆಕ್ರೋಶಭರಿತವಾಗಿ ಬಿಜೆಪಿ ಸಂಸದರು ಹಾಗೂ ಸಚಿವರ ವಿರುದ್ಧ ಕಿಡಿಕಾರಿದ್ದಾರೆ.
ಮೂಲಗಳ ಪ್ರಕಾರ, ಪೊಲೀಸರು ಈಗ ಸುಮಾರು 21 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಇದರ ಹಿಂದೆ ಯಾರ್ಯಾರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.