ಎನ್‍ಐಎ ಭರ್ಜರಿ ಬೇಟೆ : ಕೇರಳ, ಪಶ್ಚಿಮ ಬಂಗಾಳದಲ್ಲಿ 9 ಅಲ್-ಖೈದಾ ಉಗ್ರರ ಸೆರೆ..!

Spread the love

ನವದೆಹಲಿ, ಸೆ.19- ಕೇರಳ ಮತ್ತು ಪಶ್ಚಿಮ ಬಂಗಾಳದ ಕೆಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ನಡೆಸಿ ದಾಳಿಗಳ ವೇಳೆ ಕುಖ್ಯಾತ ಉಗ್ರಗಾಮಿ ಸಂಘಟನೆಯಾದ ಅಲ್-ಕೈದಾಗೆ ಸೇರಿದ ಒಂಭತ್ತು ಭಯೋತ್ಪಾದಕರನ್ನು ಸೆರೆಹಿಡಿಯಲಾಗಿದೆ.  ಬಂಧಿತ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‍ಐಎ ನಡೆಸಿದ ಈ ಭರ್ಜರಿ ಕಾರ್ಯಾಚರಣೆಯಿಂದಾಗಿ ಈ ಎರಡೂ ರಾಜ್ಯಗಳೂ ಸೇರಿದಂತೆ ಹಲವೆಡೆ ಮುಂದೆ ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ. ಕೇರಳದ ಎರ್ನಾಕುಲಂ ಮತ್ತು ಪಶ್ಚಿಮ ಬಂಗಾಳದ ಮುರ್ಷಿರಾಬಾದ್ ನಗರಗಳ ವಿವಿಧೆಡೆ ನಡೆಸಿದ ದಾಳಿಗಳಲ್ಲಿ ಒಂಭತ್ತು ಅಲ್-ಕೈದಾ ಉಗ್ರರನ್ನು ಬಂಧಿಸಲಾಗಿದೆ ಎಂದು ಎನ್‍ಐಎ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇರಳ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ಅಲ್-ಕೈದಾ ಉಗ್ರಗಾಮಿಗಳು ಸಕ್ರಿಯರಾಗಿದ್ದಾರೆಂಬ ಖಚಿತ ಮಾಹಿತಿ ಲಭಿಸಿದೆ. ಈ ಭಯೋತ್ಪಾದಕರು ಭಾರತದ ಪ್ರಮುಖ ಸ್ಥಳಗಳ ಮೇಲೆ ಭಯಾನಕ ವಿಧ್ವಂಸಕ ದಾಳಿಗಳನ್ನು ನಡೆಸಿ ಅನೇಕ ಮುಗ್ಧ ಜನರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.

ಎನ್‍ಐಎ ನಡೆಸಿದ ದಾಳಿಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಆರು ಮತ್ತು ಕೇರಳದಲ್ಲಿ ಮೂವರು ಅಲ್-ಕೈದಾ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಸೆರೆಹಿಡಿಯಲ್ಪಟ್ಟ ಭಯೋತ್ಪಾದಕರಿಂದ ಅತ್ಯಾಧುನಿಕ ಕಲಾಶ್ನಿಕೋವ್ ರೈಫಲ್‍ಗಳು, ಸ್ವಯಂಚಾಲಿತ ಅಸ್ತ್ರಗಳು, ಬುಲೆಟ್‍ಗಳಿರುವ ಮ್ಯಾಗಝೈನ್‍ಗಳು, ಪಿಸ್ತೂಲ್‍ಗಳು, ಸ್ಪೋಟಕಗಳು, ನಾಡ ಶಸ್ತ್ರಾಸ್ತ್ರಗಳು, ಹರಿತವಾದ ಆಯುಧಗಳು, ಸ್ಥಳೀಯವಾಗಿ ತಯಾರಿಸಲಾದ ಮಾರಕಾಸ್ತ್ರಗಳು, ಡಿಜಿಟಲ್ ಸಾಧನಗಳು, ದಾಖಲೆ ಪತ್ರಗಳು, ಜಿಹಾದಿ (ಧರ್ಮಯುದ್ಧ) ಸಾಹಿತ್ಯ, ನಾಡಬಾಂಬ್‍ಗಳನ್ನು ತಯಾರಿಸುವ ಬಗ್ಗೆ ಮಾಹಿತಿಗಳು ಇರುವ ಲೇಖನಗಳು ಮತ್ತು ವಿವರಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಉಗ್ರರು ಭಯೋತ್ಪಾದನೆ ಮತ್ತು ಬುಡಮೇಲು ಕೃತ್ಯಗಳಿಗಾಗಿ ಹಣ ಸಂಗ್ರಹಣೆಯಲ್ಲಿ ತೊಡಗಿದ್ದರು. ಅಲ್ಲದೆ, ಈ ಗ್ಯಾಂಗ್‍ನ ಕೆಲವು ಸದಸ್ಯರು ದೆಹಲಿಗೆ ತೆರಳಿ ಮತ್ತಷ್ಟು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಯೋಜನೆ ರೂಪಿಸಿದ್ದರು.

ಬಂಧಿತರನ್ನು ಮುರ್ಷಿದ್ ಹಸನ್, ಇವಕುಬ್ ಬಿಸ್ವಾಸ್, ಮೊಸರಫ್ ಹೊಸೆನ್, ನಜ್ಮುಸ್ ಸಾಕೀಬ್, ಅಬು ಸುಫಿಯಾನ್, ಮೈಂಜುಲ್ ಮೊಂಡಲ್, ಲೆಯು ಇಯಾನ್ ಅಹಮದ್ ಅಲ್-ಮಮುನ್ ಕಮಲ್ ಹಾಗೂ ಅತಿತುರ್ ರೆಹಮಾನ್ ಎಂದು ಗುರುತಿಸಲಾಗಿದೆ.  ಬಂಧಿತರನ್ನು ಕೇರಳ ಮತ್ತು ಪಶ್ಚಿಮಬಂಗಾಳದ ನ್ಯಾಯಾಲಯಗಳಿಗೆ ಹಾಜರುಪಡಿಸಲಾಗಿದ್ದು, ಉಗ್ರರನ್ನು ಹೆಚ್ಚಿನ ವಿಚಾರಣೆಗಾಗಿ ಎನ್‍ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.

ಈ ಉಗ್ರರು ಪಾಕಿಸ್ತಾನದ ಅಲ್-ಕೈದಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದು, ದೆಹಲಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳ ಮೇಲೆ ವಿಧ್ವಂಸಕ ದಾಳಿಗಳನ್ನು ನಡೆಸಲು ಪ್ರೇರಣೆ ಪಡೆದಿದ್ದರು ಎಂದು ಎನ್‍ಎಐ ಹಿರಿಯ ಅಧಿಕಾರಿ ವಿವರಿಸಿದ್ದಾರೆ.

ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ತಾನ, ಉತ್ತರ ಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ಅಲ್‍ಕೈದಾ ಮತ್ತು ಐಸಿಸ್ ಉಗ್ರಗಾಮಿಗಳು ಸಕ್ರಿಯವಾಗಿದ್ದಾರೆ ಎಂದು ಮೊನ್ನೆಯಷ್ಟೇ ಕೇಂದ್ರ ಸರ್ಕಾರ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿತ್ತು. ದಕ್ಷಿಣ ಭಾರತದ 17 ಸ್ಥಳಗಳಲ್ಲಿ ಇತ್ತೀಚೆಗೆ ದಾಳಿಗಳನ್ನು ನಡೆಸಿದ್ದ ಎನ್‍ಐಎ 122 ಐಸಿಸ್ ಉಗ್ರಗಾಮಿಗಳನ್ನು ಬಂಧಿಸಿತ್ತು.

Facebook Comments