ಬಡ ಕುಟುಂಬದ ರೊಟ್ಟಿ ಕಿತ್ತುಕೊಂಡ ಭಯೋತ್ಪಾದಕರು

Spread the love

ರಜೌರಿ, ಮೇ 19- ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ರಂಜಿತ್ ಸಿಂಗ್ ಹತ್ಯೆಯಾಗಿದ್ದು, ಅವರ ಕುಟುಂಬದ ಏಕೈಕ ಜೀವನಾಧಾರವನ್ನು ಕಿತ್ತುಕೊಂಡಂತಾಗಿದೆ. ರಾಜೌರಿಯಲ್ಲಿರುವ ತಮ್ಮ ಮನೆಯಿಂದ 470 ಕಿಮೀ ದೂರದಲ್ಲಿರುವ ಬಾರಾಮುಲ್ಲಾದಲ್ಲಿ ಹೊಸದಾಗಿ ತೆರೆಯಲಾದ ಮದ್ಯದ ಅಂಗಡಿಯಲ್ಲಿ ರಂಜಿತ್ ಸಿಂಗ್ ಸೇಲ್ಸ್‍ಮ್ಯಾನ್ ಆಗಿ 20 ದಿನಗಳ ಹಿಂದೆ ಕೆಲಸಕ್ಕೆ ಸೇರಿದರು.

ಬಡತನ ರೇಖೆಗಿಂತ ಕೆಳಗಿರುವ ಅವರ ಏಳು ಜನರ ಕುಟುಂಬದಲ್ಲಿ ಉತ್ತಮ ಜೀವನದ ಭರವಸೆಯನ್ನು ತುಂಬಿದ್ದರು. ಮಂಗಳವಾರ ಸಂಜೆ ಅವರು ಗ್ರೆನೇಡ್ ದಾಳಿಯಲ್ಲಿ ಅವರನ್ನು ಕೊಲ್ಲಲಾಗಿದೆ. ಈ ಮೂಲಕ ಕುಟುಂಬದ ಭರವಸೆಗಳು ನಾಶವಾಗಿವೆ. ಘಟನೆಯ ದಿನದಂದು ಬುರ್ಖಾ ಧರಿಸಿದ ಭಯೋತ್ಪಾದಕ ಅಂಗಡಿ ಬಳಿ ಹೋಗಿ, ಪೋರ್ಟ್‍ಹೋಲ್ ಕಿಟಕಿಯ ಮೂಲಕ ಗ್ರೆನೇಡ್ ಎಸೆದಿದ್ದಾನೆ. ಅದು ಸೋಟಿಸಿ ರಂಜಿತ್ ಸಾವ್ನ್ನಪ್ಪಿದ್ದಲ್ಲದೆ, ಇತರ ಮೂವರು ಗಾಯಗೊಂಡರು.

ಗಾಯಗೊಂಡ ನೌಕರರನ್ನು ಕಥುವಾದ ಬಿಲ್ಲವರ್ ನಿವಾಸಿಗಳಾದ ಗೋವರ್ಧನ್ ಸಿಂಗ್, ರವಿಕುಮಾರ್ ಮತ್ತು ರಾಜೌರಿಯ ಕಂಗ್ರಾ ನಿವಾಸಿ ಗೋವಿಂದ್ ಸಿಂಗ್ ಎಂದು ಗುರುತಿಸಲಾಗಿದೆ. ನನ್ನ ಕುಟುಂಬದ ಏಕೈಕ ರೊಟ್ಟಿಯನ್ನು ಭಯೋತ್ಪಾದಕರು ಕಿತ್ತುಕೊಂಡರು ಎಂದು ರಂಜಿತ್ ಸಿಂಗ್ ಅವರ ಪುತ್ರಿ ಶಿವಾನಿ ಬುಧವಾರ ತನ್ನ ತಂದೆಯ ಶವ ಅಂತ್ಯಸಂಸ್ಕಾರದಲ್ಲಿ ಅಳಲು ತೋಡಿಕೊಂಡರು.

ಹಿಂದೂ ಆಗಿರುವುದು ಅಪರಾಧವಲ್ಲ. ಹಿಂದೂಗಳೂ ಕಾಶ್ಮೀರದಲ್ಲಿ ಕೆಲಸ ಮಾಡಬಹುದು. ಇದು ಇಸ್ಲಾಮಿಕ್ ರಾಜ್ಯವಲ್ಲ ಎಂದು ಸಿಂಗ್ ಅವರ ಎರಡನೇ ಪುತ್ರಿ ಪ್ರಿಯಾಂಕಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ನಮ್ಮ ಜೀವನ ಉತ್ತಮವಾಗಬಹುದೆಂದು ಭಾವಿಸಿದ್ದೇವು. ಆದರೆ ಭಯೋತ್ಪಾದಕರು ನಮ್ಮ ಕನಸುಗಳನ್ನು ಛಿದ್ರಗೊಳಿಸಿದರು. ನಾವು ಈಗ ಏನು ಮಾಡಬೇಕು. ನಮಗೆ ಆಹಾರ ನೀಡುವವರು ಯಾರು? ಅವರು ನಮ್ಮ ಏಕೈಕ ರೊಟ್ಟಿಯನ್ನು ಕಸಿದುಕೊಂಡರು. ಅವರು ನಮ್ಮ ತಂದೆಯನ್ನು ಕೊಂದರು ಎಂದು ಅಳಲು ತೊಡಿಕೊಂಡಿದ್ದಾಳೆ.

ಬುಧವಾರ ಬೆಳಗ್ಗೆ ಬಕ್ರಾದಲ್ಲಿರುವ ರಂಜಿತ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಬಾರಾಮುಲ್ಲಾದಿಂದ ತಂದಾಗ ನೂರಾರು ಶೋಕತಪ್ತರು ಅವರ ಮನೆ ಬಳಿ ಜಮಾಯಿಸಿದರು. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗಿ, ಶವವನ್ನು ಹೆದ್ದಾರಿಯಲ್ಲಿ ಇರಿಸಿ ಪ್ರತಿಭಟನೆ ನಡೆಸಲಾಯಿತು.

ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು. ಕುಟುಂಬಕ್ಕೆ 25 ಲಕ್ಷ ಪರಿಹಾರ ಹಾಗೂ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಾರಾಮುಲ್ಲಾ ಪೊಲೀಸರು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಉಗ್ರರಿಂದ ಐದು ಪಿಸ್ತೂಲ್‍ಗಳು, 23 ಗ್ರೆನೇಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ವರು ಭಯೋತ್ಪಾದಕರು ಮತ್ತು ಎಲ್‍ಇಟಿ ಸಂಘಟನೆಯ ಒಬ್ಬ ಸಹಚರನನ್ನು ಬಂಧಿಸಲಾಗಿದೆ. ಬಾರಾಮುಲ್ಲಾದ ಲಷ್ಕರ್ ಎ ತಯ್ಬಾ ಘಟಕ ಈ ಭಾಗದಲ್ಲಿ ಹಲವಾರು ಭಯೋತ್ಪಾದಕ ಘಟನೆಗಳಲ್ಲಿ ಭಾಗಿಯಾಗಿದೆ. ಅವುಗಳ ತನಿಖೆ ನಡೆಯುತ್ತಿದೆ ಎಂದು ಕಾಶ್ಮೀರದ ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.

Facebook Comments