ಲಂಡನ್, ಜ.17- ಅಮೆರಿಕಾದ ಟೆಕ್ಸಾಸ್‍್ ನ ಯಹೂದಿಯರ ಗುಡಿಯಲ್ಲಿ ಹಲವರನ್ನು ಒತ್ತೆಯಾಳಾಗಿರಿಸಿಕೊಂಡು, ಪಾಕಿಸ್ತಾನದ ವಿಜ್ಞಾನಿಯ ಬಿಡುಗಡೆಗೆ ಒತ್ತಾಯಿಸಿ ಪೊಲೀಸ್ ರಿಂದ ಹತ್ಯೆಯಾದ ಅಕ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರನ್ನು ಲಂಡನ್‍ನಲ್ಲಿ ಬಂಧಿಸಲಾಗಿದೆ.
44 ವರ್ಷದ ಬ್ರಿಟಿಷ್ ಪ್ರಜೆ ಮಲಿಕ್ ಫೈಸಲ್ ಅಕ್ರಂ ಬ್ಲ್ಯಾಕ್ ಬರ್ನ್ ನಿಂದ ಟೆಕ್ಸಾಸ್‌ನಲ್ಲಿ ದುಷ್ಕೃತ್ಯಕ್ಕೆ ಕೈ ಹಾಕಿ 10 ಗಂಟೆಯ ಆತಂಕದ ಕಾಲದ ನಡುವೆ ಕಾಲಿವಿಲ್ಲೆಯಲ್ಲಿ ಪೊಲೀಸರೊಂದಿಗೆ ಸಂಘರ್ಷದಲ್ಲಿ ಹತ್ಯೆಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸಿರುವ ಅಮೆರಿಕಾದ ಪೊಲೀಸರು, ಗ್ರೇಟರ್ ಮ್ಯಾಂಚೆಸ್ಟರ್ ಪೋಲೀಸ್ ರೊಂದಿಗೆ ಸಂಪರ್ಕ ಹೊಂದಿದ್ದು ತನಿಖೆ ಮುಂದುವರೆದಿದೆ. ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದೆ.
ಅಮೆರಿಕಾ ಪೊಲೀಸ್ ಮೂಲಗಳ ಪ್ರಕಾರ, ಅಕ್ರಮ್ ಎರಡು ವಾರಗಳ ಹಿಂದೆ ನ್ಯೂಯಾರ್ಕ್ ನ ಜೆಎಫ್‌ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶಕ್ಕೆ ಬಂದಿದ್ದಾನೆ. ಡಲ್ಲಾಸ್‌ನ ಉಪನಗರ ಕಾಂಗ್ರೆಗೇಷನ್ ಬೆತ್ ಇಸ್ರೇಲ್ ನಲ್ಲಿರುವ ಯಹೂದಿಯರ ಗುಡಿಯಲ್ಲಿ ಸ್ಥಳೀಯ ಸಮಯ ಸುಮಾರು 11 ಗಂಟೆ ಸುಮಾರಿಗೆ ತನ್ನ ಕೃತ್ಯ ಆರಂಭಿಸಿದ್ದ. ಒತ್ತೆಯಾಳುಗಳಲ್ಲಿ ಯಹೂದಿಯರ ಗುಡಿಯ ರಬ್ಬಿ ಕೂಡ ಇದ್ದರು.
ಒಬ್ಬ ಒತ್ತೆಯಾಳನ್ನು ಆರು ಗಂಟೆಗಳ ನಂತರ ಬಿಡುಗಡೆ ಮಾಡಲಾಯಿತು ಮತ್ತು ಇತರ ಮೂವರನ್ನು ಹಲವಾರು ಗಂಟೆಗಳ ನಂತರ ಕಮಾಂಡೋಗಳು ಸುರಕ್ಷತವಾಗಿ ಕರೆ ತಂದರು.
ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ಜೈಲಿನಲ್ಲಿ ಪ್ರಸ್ತುತ 86 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ಪಾಕಿಸ್ತಾನಿ ನರವಿಜ್ಞಾನಿ ಆಫಿಯಾ ಸಿದ್ದಿಕಿಯನ್ನು ಬಿಡುಗಡೆ ಮಾಡುವಂತೆ ಆರೋಪಿ ಬೇಡಿಕೆಯಿಟ್ಟಿದ್ದ ಎಂದು ಕಾನೂನು ಜಾರಿ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅಕ್ರಂನ ನಡವಳಿಕೆಯನ್ನು ಭಯೋತ್ಪಾದನೆಯ ಕೃತ್ಯ ಎಂದು ಘೋಷಿಸಿದರು. ಆದರೆ ಅಕ್ರಮ್ ಯಹೂದಿಯರ ಗುಡಿಯನ್ನೇ ಏಕೆ ಗುರಿಯಾಗಿಸಿಕೊಂಡಿದ್ದ ಎಂಬುದನ್ನು ಅರಿತುಕೊಳ್ಳಲು ಮತ್ತಷ್ಟ ತನಿಖೆ ನಡಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
15 ವರ್ಷಗಳ ಹಿಂದೆ ಟೆಕ್ಸಾಸ್ ದಾಳಿಯಲ್ಲಿ ಬಂಧಿಸಲ್ಪಟ್ಟ ಮತ್ತು 10 ವರ್ಷಗಳಿಂದ ಜೈಲಿನಲ್ಲಿರುವ ವ್ಯಕ್ತಿಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದನ್ನು ಅಧ್ಯಕ್ಷ ಬಿಡೆನ್ ದೃಢ ಪಡಿಸಿದ್ದಾರೆ. ದಾಳಿಕೋರನು ಅಮೆರಿಕಾಕ್ಕೆ ಬಂದಿಳಿದ ನಂತರ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದಾನೆ ಎಂದು ತಿಳಿಸಿದ್ದಾರೆ.
ಅಕ್ರಂನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಮತ್ತು ಅಪರಾಧ ಇತಿಹಾಸವನ್ನು ಹೊಂದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಕ್ರಂ ಸಹೋದರ ಗುಲ್ಬರ್, ಬ್ಲಾಕ್‌ಬರ್ನ್ ಮುಸ್ಲಿಂ ಸಮುದಾಯದ ಫೇಸ್‌ಬುಕ್ ಪುಟದಲ್ಲಿ ತಮ್ಮ ಸಹೋದರನ ಸಾವನ್ನು ಖಚಿತಪಡಿಸಿದ್ದಾರೆ. ದಾಳಿಯಿಂದ ಸಂತ್ರಸ್ತರಾದವರೊಂದಿಗೆ ಅವರು ಕ್ಷಮೆಯಾಚಿಸಿದ್ದು, ತಮ್ಮ ಸಹೋದರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದಿದ್ದಾರೆ.
ಒತ್ತೆಯಾಳುಗಳನ್ನು ಇರಿಸಿಕೊಂಡಿದ್ದ ಸಮಯದಲ್ಲಿ ಸಮಾಲೋಚಕರು, ಎಫ್‌ಬಿಐ ಅಧಿಕಾರಿಗಳು ತಮ್ಮ ಸಹೋದರನೊಂದಿಗೆ ಸಂಪರ್ಕ ಹೊಂದಿದ್ದರು. ಕುಟುಂಬದ ಸದಸ್ಯರಾದ ನಾವು ಅತನಿಗೆ ಹೇಳಲು ಏನೂ ಇರಲಿಲ್ಲ. ಆತನ ಕೃತ್ಯವನ್ನು ನಾವು ಕ್ಷಮಿಸುವುದಿಲ್ಲ ಎಂದು ಸಹೋದರ ಸ್ಪಷ್ಟ ಪಡಿಸಿದ್ದಾರೆ. ಯಹೂದಿ, ಕ್ರಿಶ್ಚಿಯನ್, ಮುಸ್ಲಿಂ ಸೇರಿದಂತೆ ಇತ್ಯಾದಿ ಯಾವುದೇ ಸಮುದಾಯದ ಜನರ ಮೇಲೆ ದಾಳಿಯನ್ನು ತಾವು ಖಂಡಿಸುವುದಾಗಿ ತಿಳಿಸಿದರು.
