ಸಕಾಲಕ್ಕೆ ಪಠ್ಯಪುಸ್ತಕ, ಸೈಕಲ್ ವಿತರಣೆ : ಸಿಎಂ ಬೊಮ್ಮಾಯಿ
ಬೆಂಗಳೂರು,ಮೇ16- ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಗತ್ಯವಿರುವ ಪಠ್ಯಪುಸ್ತಕ ಮತ್ತು ಸೈಕಲ್ಗಳನ್ನು ಸಕಾಲಕ್ಕೆ ವಿತರಣೆ ಮಾಡಲು ಸರ್ಕಾರ ಸಿದ್ದವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ರಾಜ್ಯಾದ್ಯಂತ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಶಾಲೆಗಳನ್ನು ಎರಡು ವಾರ ಮುಂಚಿತವಾಗಿಯೇ ಆರಂಭಿಸುತ್ತಿದ್ದೇವೆ. ಮಕ್ಕಳ ಕಲಿಕೆಗೆ ತೊಂದರೆಯಾಗದಂತೆ ಪಠ್ಯಪುಸ್ತಕ ಮತ್ತು ಸೈಕಲ್ಗಳನ್ನು ವಿತರಣೆ ಮಾಡಲು ಸಿದ್ದವಿದ್ದೇವೆ ಎಂದು ಹೇಳಿದರು.
ಪಠ್ಯ ಪುಸ್ತಕ ಇಲ್ಲವೇ ಸೈಕಲ್ ವಿತರಣೆ ವಿಳಂಬವಾಗುತ್ತದೆ ಎಂಬ ಆತಂಕ ಯಾರಿಗೂ ಬೇಡ. ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳ ಕೈಗೆ ತಲುಪುವಂತೆ ವ್ಯವಸ್ಥೆ ಮಾಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಕಾಲಕ್ಕೆ ಸರಿಯಾಗಿ ಶಾಲೆಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲ.
ಈ ಬಾರಿ ಕೋವಿಡ್ ಆತಂಕ ಇಲ್ಲದಿರುವ ಕಾರಣ ಮಕ್ಕಳು ವಾತಾವರಣಕ್ಕೆ ಹೊಂದಿಕೊಳ್ಳಲಿ ಎಂಬ ಕಾರಣಕ್ಕಾಗಿಯೇ ಮುಂಚಿತವಾಗಿ ಪ್ರಾರಂಭಿಸುತ್ತಿದ್ದೇವೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು. ಬಹಳ ದಿನಗಳ ನಂತರ ಶಾಲೆ ಆರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಒಳ್ಳೆಯ ವಾತವಾರಣ ನಿರ್ಮಾಣವಾದರೆ ಮಕ್ಕಳಿಗೆ ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಎಲ್ಲಾ ಮಕ್ಕಳಿಗೂ ಶಾಲೆಗೆ ಸ್ವಾಗತ ಕೋರುತ್ತೇನೆ. ಯಾವುದೇ ಆತಂಕವಿಲ್ಲದೆ ಶಾಲೆಗೆ ಬಂದು, ಪಾಠಪ್ರವಚನಗಳನ್ನು ಕಲಿಯಿತು. ಮುಂಬರುವ ದಿನಗಳಲ್ಲಿ ಎಲ್ಲಾವನ್ನು ನೀಡಿ ಒಳ್ಳೆಯ ವಾತವಾರಣ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.