ಮುಗಿಯದ ಪಠ್ಯ ಪರಿಷ್ಕರಣೆ ಗೊಂದಲ, ಮಕ್ಕಳಿಗೆ ಸಂಕಷ್ಟ..

Social Share

ಬೆಂಗಳೂರು,ಜು.15- ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ನಾಡಿನ ಮಕ್ಕಳು ಪುಸ್ತಕಗಳಿಲ್ಲದೇ ಶಾಲೆಗೆ ತೆರಳುವ ಸ್ಥಿತಿ ಬಂದಿದೆ. ಎರಡೆರಡು ಬಾರಿ ಪಠ್ಯಪುಸ್ತಕಗಳು ಪರಿಷ್ಕರಣೆಗೊಂಡಿದ್ದು, ಮರುಪರಿಷ್ಕೃತಗೊಂಡ ಕೇವಲ ಒಂದು ಕಿರುಪುಸ್ತಕವನ್ನು ಶಾಲೆಗಳಿಗೆ ನೀಡಲಾಗುತ್ತಿದೆ.

ಮರು ಪರಿಷ್ಕರಣೆಗೊಂಡ ಪುಸ್ತಕಗಳ ಮುದ್ರಣ ಇನ್ನೂ ಪ್ರಾರಂಭವಾಗಬೇಕಿದ್ದು, ಅದನ್ನು 15 ದಿನಗಳಲ್ಲಿ ಪೂರ್ಣಗೊಳಿಸಿ ಶಾಲೆಗಳಿಗೆ ವಿತರಿಸಬೇಕು ಎಂದು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಮೂಲಗಳು ತಿಳಿಸಿವೆ. ಅಂದರೆ, ರಾಜ್ಯದ ಮಕ್ಕಳಿಗೆ ಮರು ಪರಿಷ್ಕೃತಗೊಂಡಿರುವ ಪುಸ್ತಕಗಳ ನಕಲು (ಜೆರಾಕ್ಸ್) ಪ್ರತಿಯನ್ನು ನೀಡಲಾಗುತ್ತದೆ.

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಿಂದಾದ ಎಡವಟ್ಟುಗಳು ಒಂದೆರಡಲ್ಲ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ನಾರಾಯಣಗುರು, ಬಸವಣ್ಣ, ಅಕ್ಷರದವ್ವ ಸಾವಿತ್ರಿ ಬಾಪುಲೆ, ರಾಷ್ಟ್ರಕವಿ ಕುವೆಂಪು ಸೇರಿದಂತೆ ಹಲವು ಮಹನೀಯರಿಗೆ ಅವಮಾನ ಮಾಡಿ, ಸಿದ್ದಗಂಗಾ ಮಠ ಮತ್ತು ಆದಿಚುಂಚನಗಿರಿ ಮಠದ ಸೇವೆಗಳ ಮರುಪರಿಚಯ ಸೇರಿದಂತೆ ಹಲವು ವಿಷಯಗಳಿಗೆ ಕತ್ತರಿ ಪ್ರಯೋಗ ಮಾಡಿತ್ತು.

ಚಕ್ರತೀರ್ಥ ಸಮಿತಿಯ ಎಡವಟ್ಟಿನ ವಿರುದ್ಧ ನಾಡಿನಲ್ಲಿ ಭಾರಿ ಪ್ರತಿಭಟನೆ, ಆಕ್ರೋಶ ಉಂಟಾಗಿತ್ತು, ಮೊದಲಿಗೆ ಎಲ್ಲವೂ ಸರಿಯಿದೆ ಎಂದು ಚಕ್ರತೀರ್ಥನ ಬೆಂಬಲಕ್ಕೆ ನಿಂತಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಬಳಿಕ ಒಂದೊಂದೆ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದಾರೆ.

ಈ ಸಮಿತಿ ಪರಿಷ್ಕರಣೆ ಮಾಡಿರುವ ಎಲ್ಲಾ ಪಠ್ಯಪುಸ್ತಕಗಳನ್ನು ವಾಪಸ್ ಪಡೆದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿ ಪರಿಷ್ಕರಣೆ ಮಾಡಿದ್ದ ಹಳೆಯ ಪುಸ್ತಕಗಳನ್ನೇ ನೀಡಲು ಆಗ್ರಹ ಕೇಳಿ ಬರುತ್ತಿದೆ. ಆದರೂ ಸರ್ಕಾರ ಕೆಲವು ತಪ್ಪುಗಳನ್ನು ಸರಿ ಪಡಿಸಿ ಪುಸ್ತಕ ವಿತರಿಸುವುದಾಗಿ ತಿಳಿಸಿದ್ದು, ಅವುಗಳನ್ನು ಕೂಡ ಮಕ್ಕಳಿಗೆ ತಲುಪಿಸುವಲ್ಲಿ ಎಡವಿದೆ.

ಮರು-ಪರಿಷ್ಕರಣೆಯಾದಾಗಲೆಲ್ಲಾ ಈ ವ್ಯವಸ್ಥೆಯನ್ನು ಅನುಸರಿಸಲಾಗುತ್ತದೆ. ಕೇವಲ ಎಂಟು ತಿದ್ದುಪಡಿಗಳನ್ನು ಅನುಮೋದಿಸಲಾಗಿದೆ, ಆದ್ದರಿಂದ ಎಲ್ಲೆಲ್ಲಿ ತಪ್ಪಾಗಿವೆಯೋ ಆ ನಿರ್ದಿಷ್ಟ ಸಾಲುಗಳು ಅಥವಾ ಕಾಣೆಯಾಗಿರುವ ಪದಗಳನ್ನು ಸೇರಿಸಿಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕಗಳ ಮುದ್ರಣ ಮಾಡುವಾಗ ತಿದ್ದುಪಡಿಗಳನ್ನು ಸೇರಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಕಾರಿಯೊಬ್ಬರು ತಿಳಿಸಿದ್ದಾರೆ.

ಪಠ್ಯಪುಸ್ತಕದ ಸಾಫ್ಟ್ ಕಾಪಿಯನ್ನು ಶಿಕ್ಷಕರಿಗೆ ಮತ್ತು ಪಠ್ಯಪುಸ್ತಕ ಸೊಸೈಟಿ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಮರು ಪರಿಷ್ಕೃತ ಭಾಗದ ಸಾಫ್ಟ್ ಕಾಪಿ ಅಥವಾ ನಕಲು ಪ್ರತಿಯನ್ನು ಸಹ ವಿದ್ಯಾರ್ಥಿಗಳಿಗೆ ಹಂಚಬಹುದು ಎಂದು ಅವರು ಹೇಳಿದ್ದಾರೆ.

ಕಲಿಕಾ ಪುನಶ್ಚೇತನ ಕಾರ್ಯಕ್ರಮ ನಡೆಯುತ್ತಿದೆ. 1ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕಲಿಕಾ ಹಾಳೆಗಳು ಮತ್ತು ಶಿಕ್ಷಕರ ಕೈಪಿಡಿಗಳನ್ನು ಬಳಸಲಾಗುತ್ತಿದೆ. ಪಠ್ಯಪುಸ್ತಕಗಳ ಮುದ್ರಣ ವಿಳಂಬ, ಅಥವಾ ಮರು ಪರಿಷ್ಕರಣೆ ಸರ್ಕಾರಿ ಶಾಲೆಗಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ತಡವಾಗಿ ಬಂದ ಕಲಿಕಾ ಚೇತಾರಿಕೆ ಸಾಮಗ್ರಿಗಳ ನಕಲು ಪ್ರತಿಗಳೊಂದಿಗೆ ನಿರ್ವಹಿಸಲಾಗಿದೆ. 15 ದಿನಗಳ ಕಾರ್ಯಕ್ರಮಗಳ ನಂತರ, ಎಸ್‍ಎಸ್‍ಎಲ್‍ಸಿಗೆ ನಿಯಮಿತ ಪಾಠಗಳು ಪ್ರಾರಂಭವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಶಾಲೆಗಳು ಆರಂಭವಾಗಿ ಎರಡು ತಿಂಗಳಾಗಿವೆ. ಶೇ.96.5ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ಶೇ.92.02ರಷ್ಟು ಪುಸ್ತಕಗಳು ಶಾಲೆಗಳಿಗೆ ತಲುಪಿವೆ. ಉಳಿದ ಪಠ್ಯಪುಸ್ತಕಗಳು ಒಂದು ತಿಂಗಳಲ್ಲಿ ಎಲ್ಲ ಶಾಲೆಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

Articles You Might Like

Share This Article