ಮುಂಬೈ, ಆ.6- ಒಂದು ವರ್ಷದ ಹಿಂದೆಯೇ ಉದ್ದವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿ ಸ್ನೇಹ ಬೆಳೆಸಲು ನಿರ್ಧರಿಸಿದ್ದರು ಎಂದು ಏಕನಾಥ್ ಸಿಂಧೆ ಬಳಗದಲ್ಲಿ ಹಿರಿಯ ನಾಯಕ ಹಾಗೂ ಶಾಸಕ ದೀಪಕ್ ಕೇಸರ್ಕರ್ ಹೇಳಿಕೆ ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಶಿವಸೇನೆಯಲ್ಲಿ ಬಂಡಾಯ ಶುರುವಾದ ನಡುವೆಯೂ ಉದ್ದವ್ ಠಾಕ್ರೆ ಅವರು ಬಿಜೆಪಿ ಜೊತೆ ಸ್ನೇಹಕ್ಕೆ ಮುಂದಾಗಿದ್ದರು. ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಕೆಲವೊಂದು ಸನ್ನಿವೇಶಗಳು ಅದನ್ನು ತಡೆದು ಕೊನೆಗೆ ಜೂನ್ 29ರಂದು ಪದತ್ಯಾಗ ಮಾಡಿದರು ಎಂದು ಕೇಸರ್ಕರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಉತ್ತಮ ಬಾಂಧವ್ಯಕ್ಕಿಂತ ನಾನು ಪಡೆದಿರುವ ದೊಡ್ಡ ಸ್ಥಾನ ಮುಖ್ಯವಲ್ಲ ಎಂದು ಉದ್ದವ್ ಠಾಕ್ರೆ ಅರಿತಿದ್ದರು ಎಂದು ಹೇಳಿದ್ದಾರೆ. ಇದರ ಬಗ್ಗೆ ಶಿವಸೇನೆ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ವಕ್ತಾರರಾಗಿ ನೇಮಕಗೊಂಡ ನಂತರ ಕೇಸರ್ಕರ ಅವರು ತಮ್ಮ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.
ಪ್ರಸ್ತುತ ಸಿಎಂ ಆಗಿರುವ ಏಕನಾಥ್ ಸಿಂಧೆ ಅವರನ್ನು ಬಿಜೆಪಿ ಬಳಗದವರ ಹತ್ತಿರ ಕಳಿಸಿ ಉದ್ದವ್ ಠಾಕ್ರೆ ಅವರು ಮಾತುಕತೆ ನಡೆಸಿದ್ದರು. ಆದರೆ ಕೆಲವೊಂದು ಷರತ್ತುಗಳಿಗೆ ಬಿಜೆಪಿ ಅವರು ಒಪ್ಪಿರಲಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ.
ಉದ್ದವ್ ಠಾಕ್ರೆ ಅವರ ಪುತ್ರ ಅಧಿತ್ಯ ಠಾಕ್ರೆ ಕೂಡ ಕೆಲ ಶಾಸಕರಿಗೆ ಪ್ರಚೋದನೆ ನೀಡಿದರು. ಗೌಹಟ್ಟಿಗೆ ತೆರಳಿದ್ದ ಶಾಸಕರೊಂದಿಗೆ ಅವರು ನಿರಂತರ ಸಂಪರ್ಕದಲ್ಲಿದ್ದರು. ಒಟ್ಟಾಗಿ ಬರುವಂತೆ ನಮಗೆ ಹೇಳಿದ್ದರು ಎಂದು ಹೇಳಿ ಕೇಸರ್ಕರ್ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದ ಮಹಾರಾಷ್ಟ್ರದ ಮಹಾ ಅಗಡಿ ಸರ್ಕಾರದ ಪಥನದ ಪ್ರಹಸನದ ಹಿಂದಿನ ಹಳೆಯ ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿದ್ದಾರೆ.