ಥಾಣೆ, ಫೆ.8- ಮಹಾರಾಷ್ಟ್ರದ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಥಾಣೆಯ ಭಿವಂಡಿ ಪಟ್ಟಣದ ಉಪಾಹಾರ ಗೃಹದಲ್ಲಿ ರಾತ್ರಿ ಊಟ ಮಾಡಿದ ನಂತರ, ನೆರೆಯ ಮುಂಬೈನ ಸಾಂತಾಕ್ರೂರಿಜ್ ನಿಂದ ಬಂದ ಇಬ್ಬರು ಆರೋಪಿಗಳು ಮಾಣಿಯೊಂದಿಗೆ ಜಗಳವಾಡಿದ್ದಾರೆ. ಉಪಾಹಾರ ಗೃಹದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ 28 ವರ್ಷದ ಪುರುಷ ಮತ್ತು ಮಹಿಳೆ ನಂತರ ನಾಲ್ವರು ಪೊಲೀಸರನ್ನು ನಿಂದಿಸಿದ್ದಲ್ಲದೆ, ಹಲ್ಲೆ ನಡೆಸಿದ್ದಾರೆ ಎಂದು ನಾರ್ಪೋಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
