ಥಾಣೆ,ಜ.3-ಮನೆಯಲ್ಲಿ 50 ರೂಪಾಯಿ ಕದಿದ್ದಕ್ಕೆ ಮಗನನ್ನು ಸಾಯುವ ಮಟ್ಟಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ ತಂದೆಯನ್ನು ಕಲ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್(10) ತಂದೆಯ ಹೊಡೆತಕ್ಕೆ ಸಾವನ್ನಪ್ಪಿರುವ ಬಾಲಕ. ಬಬ್ಲು ಓಮ್‍ಪ್ರಕಾಶ್ ಪ್ರಜಾಪತಿ(41) ಕೊಲೆ ಮಾಡಿರುವ ಆರೋಪಿ.
ಕಲ್ವಾ ಠಾಣೆಯ ವ್ಯಾಪ್ತಿ ಥಕುರ್ಪದ ಕೊಳೆಗೇರಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಡಿ.29ರಂದು ರಾತ್ರಿ ಕಿರಣ್‍ನನ್ನು ತಂದೆ ಥಳಿಸಿದಾಗ ಆತನ ಏಟಿಗೆ ಮಗ ರಾತ್ರಿಯೆಲ್ಲ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಜೈ ಮಾ ಸಂತೋಷಿ ಚಾವಲ್‍ನ ಗೈಯ್ಕರ್ ಮೈದಾನ್‍ನಲ್ಲಿ ಬ್ಲಾಂಕೆಟ್‍ನಿಂದ ಸುತ್ತಿದ್ದ ಹಲವು ಗಾಯಗಳ ಗುರುತುಗಳಿದ್ದ ಬಾಲಕನನ್ನು ಕಂಡ ದಾರಿಹೋಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಕಾಲ್ವ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೂಡಲೇ ಆತನನ್ನು ಚತ್ರಪತಿ ಶಿವಾಜಿ ಮಹಾರಾಜ್ ಹಾಸ್ಪಟೆಲ್‍ಗೆ ಕರೆದೊಯ್ದಾಗ ಆತ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದು, ಬಾಲಕನ ಭುಜ ಮತ್ತು ಕಾಲಿಗೆ ಮುರಿತವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದಿರುವುದರಿಂದ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ತನಿಖೆ ಕೈಗೊಂಡ ಪೊಲೀಸರು ನೆರೆಹೊರೆಯವರನ್ನು ವಿಚಾರಿಸಿದಾಗ ಬಾಲಕನ ವಿವರಗಳು ಪತ್ತೆಯಾಗಿವೆ. ಬಳಿಕ ಮೃತ ಬಾಲಕನ ಸಹೋದರಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.
ಮಗನನ್ನು ಕೊಂದು ಪರಾರಿಯಾಗಿದ್ದ ತಂದೆ ಓಂಪ್ರಕಾಶ್ ಬಳಿಕ ತನ್ನ ಏರಿಯಾದಲ್ಲಿ ತಿರುಗಾಡುತ್ತಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
