Saturday, September 23, 2023
Homeಇದೀಗ ಬಂದ ಸುದ್ದಿಬಿಜೆಪಿ-ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ನೂರೆಂಟು ವಿಘ್ನ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ನೂರೆಂಟು ವಿಘ್ನ

- Advertisement -

ಬೆಂಗಳೂರು, ಸೆ.14- ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಪರಸ್ಪರ ವೈರತ್ವವನ್ನು ಮರೆತು ಒಂದಾಗಲು ಮುಂದಾಗಿದ್ದ ಬಿಜೆಪಿ, ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ನೂರೆಂಟು ವಿಘ್ನಗಳು ಎದುರಾಗಿವೆ.ಕೇಂದ್ರ ನಾಯಕರು ಜೆಡಿಎಸ್ ಜೊತೆ ಮೈತ್ರಿಗೆ ಮುಕ್ತ ಮನಸ್ಸು ಹೊಂದಿದ್ದರೂ ಸ್ಥಳೀಯ ನಾಯಕರಲ್ಲಿ ಪರಸ್ಪರ ಹೊಂದಾಣಿಕೆಯ ಸ್ವಭಾವ ಕಾಣಿಸಿಕೊಳ್ಳದಿರುವುದು ಮೈತ್ರಿಗೆ ತೊಡಕುಗಳು ಎದುರಾಗಿವೆ.

ಜೆಡಿಎಸ್ ಜೊತೆಗೆ ಬಿಜೆಪಿ ನಾಯಕರು ಆತುರಾತುರವಾಗಿ ನೀಡಿದ ಹೇಳಿಕೆಗಳು ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದರಿಂದಾಗಿ ರಾಷ್ಟ್ರೀಯ ನಾಯಕರು ಅಸಮಾಧಾನಗೊಂಡಿದ್ದು, ಇಷ್ಟು ಆತುರವಾಗಿ ಹೇಳಿಕೆ ನೀಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

- Advertisement -

ಇಂಡಿಯಾ ಮೈತ್ರಿಕೂಟದಲ್ಲಿ ಪ್ರತಿಯೊಂದು ವಿಷಯಗಳು ರಹಸ್ಯವಾಗಿ ನಡೆಯುತ್ತವೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಕೇಂದ್ರ ಗೃಹ ಸಚಿವ ಅಮಿತ್‍ಶಾ ಜೊತೆ ಮಾತುಕತೆ ನಡೆಸಲಾಗಿತ್ತು. ಇದನ್ನು ಹೊರತುಪಡಿಸಿದರೆ ಬೇರೆ 3ನೇ ವ್ಯಕ್ತಿಗೂ ಸಹ ಮಾಹಿತಿ ಇರಲಿಲ್ಲ.

ಏಕಾಏಕಿ ಮೈತ್ರಿ ಬಗ್ಗೆ ಮಾಧ್ಯಮಗಳ ಮುಂದೆ ಒಬ್ಬರಿಗೊಂದೊಂದು ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದು ಏಕೆ ಎಂದು ರಾಷ್ಟ್ರೀಯ ನಾಯಕರು ಪ್ರಶ್ನೆ ಮಾಡಿದ್ದಾರೆ ಎಂದು ಗೊತ್ತಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಹಳೆಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆಗೆ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಿಂದ ಲೋಕಸಭೆ ಚುನಾವಣೆವರೆಗೂ ಜಿದ್ದು ಸಾಧಿಸಿಯೇ ಹೋರಾಟ ಮಾಡಿದ್ದೇವೆ. ಈಗ ಅಂತವರ ಜೊತೆ ಹಸ್ತಲಾಘವ ಮಾಡುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಇದಕ್ಕೆ ಮುನ್ನುಡಿ ಎಂಬಂತೆ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಅವರು ನಮ್ಮ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಹಾಸನದಲ್ಲಿ ನಾವು ಜೆಡಿಎಸ್ ಜೊತೆ ಹೋರಾಡಿ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದೇವೆ. ಬೇಲೂರು, ಸಕಲೇಶಪುರದಲ್ಲಿ ನಮ್ಮ ಶಾಸಕರಿದ್ದರೆ ಹಾಸನ, ಕಡೂರು, ಅರಸೀಕೆರೆ ಮತ್ತು ಅರಕಲಗೂಡಿನಲ್ಲಿ ಬಿಜೆಪಿ ಸಂಘಟನೆ ಭದ್ರವಾಗಿದೆ.

ನಾವೇಕೆ ಈ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಬೇಕು. ಇಲ್ಲಿ ಕಾಂಗ್ರೆಸ್ ಅಷ್ಟೊಂದು ಪ್ರಬಲವಾಗಿಲ್ಲ. ಒಂದಿಷ್ಟು ಸಂಘಟನೆ ಮಾಡಿದರೆ ಲೋಕಸಭೆಯಲ್ಲಿ ನಾವು ಗೆಲ್ಲಬಹುದೆಂಬ ತರ್ಕವನ್ನು ಮುಂದಿಟ್ಟಿದ್ದಾರೆ.ಮಂಡ್ಯದಲ್ಲೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ನಮ್ಮ ಗತಿಯೇನು ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ.

ಸಿಕ್ಕಿಂ ಡೆಮಾಕ್ರಟಿಕ್ ಪಾರ್ಟಿ ಸೇರಿದ ಬೈಚುಂಗ್ ಭುಟಿಯಾ

ಜೆಡಿಎಸ್ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಪ್ರಬಲವಾಗಿದ್ದಾಗಲೇ ನಾನು ಪಕ್ಷೇತರಗಳಲ್ಲಿ ಸ್ರ್ಪಸಿ ವಿಜೇತಳಾಗಿದ್ದೇನೆ. ಈಗ ಅವರಿಗೆ ಕ್ಷೇತ್ರ ಬಿಟ್ಟುಕೊಡುವುದೇನೆಂದರೆ ನಮ್ಮ ರಾಜಕೀಯ ಭವಿಷ್ಯದ ಗತಿಯೇನು ಎಂದು ಬಿಜೆಪಿ ನಾಯಕರ ನಡವಳಿಕೆಗೆ ಬೇಸರಗೊಂಡಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ಬಹುತೇಕ ಕಡೆ ಇದೇ ಪರಿಸ್ಥಿತಿ ಇದೆ.ಪರಸ್ಪರ ಹಾವು-ಮುಂಗುಸಿಯಂತೆ ಚುನಾವಣೆಯಲ್ಲಿ ಕಿತ್ತಾಡಿಕೊಂಡವರು ಏಕಾಏಕಿ ಹೆಗಲ ಮೇಲೆ ಕೈಹಾಕಿ ಒಗ್ಗಟ್ಟಾಗುವುದೆಂದರೆ ಅಷ್ಟು ಸುಲಭದ ಮಾತಲ್ಲ. ಮೇಲ್ಮಟ್ಟದಲ್ಲಿ ಮೊದಲ ಹಂತದ ನಾಯಕರು ಒಂದಾಗಿರಬಹುದು. ಆದರೆ ಕೆಳಹಂತದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಂದುಕೊಂಡಷ್ಟು ಸರಳವಾಗಿಲ್ಲ ಎಂಬ ಉಭಯ ಪಕ್ಷಗಳ ಮುಖಂಡರೇ ಮಾತನಾಡಿಕೊಳ್ಳುತ್ತಿದ್ದಾರೆ.

ವಿಧಾನಸಭೆ ಚುನಾವಣೆ ಸೋತ ನಂತರ ಕಾಂಗ್ರೆಸ್ ಅಬ್ಬರವನ್ನು ಕಡಿಮೆಗೊಳಿಸಲು ಬಿಜೆಪಿ, ಜೆಡಿಎಸ್ ಮೈತ್ರಿಯಾಗಲಿವೆ ಎಂಬ ಗುಸುಗುಸು ಮಾತು ಕೇಳಿಬರುತ್ತಿತ್ತು. ಅಕೃತವಾಗಿ ಈ ಬಗ್ಗೆ ಹೇಳಿಕೆಯನ್ನು ಯಾರೂ ಕೊಟ್ಟಿರಲಿಲ್ಲ.ಯಾವಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೈತ್ರಿಯಾಗಲಿದೆ ಎಂಬ ಗುಟ್ಟನ್ನು ರಟ್ಟು ಮಾಡುತ್ತಿದ್ದಂತೆ ಎರಡು ಪಕ್ಷಗಳಲ್ಲಿ ಮಿಂಚಿನ ಸಂಚಲನ ಉಂಟಾಗಿದೆ.

ಈ ಹಿಂದೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕಹಿ ಅನುಭವ ಮಾಡಿಕೊಂಡಿರುವ ಬಿಜೆಪಿಗೆ ದಳಪತಿಗಳ ಲೆಕ್ಕಾಚಾರ ಸುಲಭವಾಗಿ ಅರ್ಥವಾಗುತ್ತಿಲ್ಲ. ಮತ್ತೊಂದೆಡೆ ಶಿವಸೇನೆ, ಎನ್‍ಸಿಪಿ ಪ್ರಾದೇಶಿಕ ಪಕ್ಷಗಳನ್ನೇ ಒಡೆದು ಹಾಕಿರುವ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಎಂದರೆ ಸೆರಗಿಗೆ ಬೆಂಕಿ ಕಟ್ಟಿಕೊಂಡಂತೆ ಎಂದು ಜೆಡಿಎಸ್‍ನವರೇ ಮಾತನಾಡಿಕೊಳ್ಳುತ್ತಿದ್ದಾರೆ.

#BJPJDSAlliance, #LoksabhaElection, #LoksabhaElection2024,

- Advertisement -
RELATED ARTICLES
- Advertisment -

Most Popular