ವೇತನ ಹೆಚ್ಚಳ ಬೆನ್ನಲ್ಲೇ ಮುಷ್ಕರ ಹಿಂಪಡೆದ ಸರ್ಕಾರಿ ನೌಕರರು

Social Share

ಬೆಂಗಳೂರು,ಮಾ.1- ಬರುವ ಏಪ್ರಿಲ್ 1ರಿಂದಲೇ ಜಾರಿಯಗುವಂತೆ ಸರ್ಕಾರಿ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಸರ್ಕಾರಿ ನೌಕರರು ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಹಿಂಪಡೆದಿದ್ದಾರೆ.

ಇದರಿಂದಾಗಿ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದ್ದು, ಆಸ್ಪತ್ರೆ ಪುರಸಭೆ, ನಗರಸಭೆ, ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರದ ಎಲ್ಲ ಸೇವೆಗಳಲ್ಲಿ ಯಥಾಸ್ಥಿತಿ ಮುಂದುವರೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗ್ಗೆ ಹಣಕಾಸು ಇಲಾಖೆ ಅಕಾರಿಗಳ ಜೊತೆ ಚರ್ಚಿಸಿ ಸರ್ಕಾರಿ ನೌಕರರ ಬೇಡಿಕೆಯಂತೆ ಶೇ.17ರಷ್ಟು ವೇತನವನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ್ದರು.
ಆದರೆ ಇದನ್ನು ಒಪ್ಪದ ಸರ್ಕಾರಿ ನೌಕರರ ಸಂಘ ಅಕೃತ ಆದೇಶ ಆಗುವವರೆಗೂ ಯಾವುದೇ ಕಾರಣಕ್ಕೂ ಮುಷ್ಕರವನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ತಕ್ಷಣವೇ ಸಿಎಂ ಸೂಚನೆ ಮೇರೆಗೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಸೇರಿದಂತೆ ಮತ್ತಿತರರು ಸರ್ಕಾರಿ ನೌಕರರ ಸಂಘದ ಪದಾಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.

ಮುಖ್ಯಮಂತ್ರಿಗಳು ಘೋಷಣೆ ಮಾಡಿರುವಂತೆ ಶೇ.17ರಷ್ಟು ವೇತನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸುವಂತೆ ನೌಕರರ ಸಂಘ ಒತ್ತಾಯಿಸಿತು. ಇದರಂತೆ ಹಣಕಾಸು ಇಲಾಖೆ ಸರ್ಕಾರಿ ನೌಕರರ ವೇತನವನ್ನು ಶೇ.17ರಷ್ಟು ಹೆಚ್ಚಿಸಿ ಆರ್ಥಿಕ ಇಲಾಖೆಯ ಅೀನ ಕಾರ್ಯದರ್ಶಿ ಜಯಶ್ರೀ ಎಂ ಅವರು ಅಕೃತ ಆದೇಶ ಹೊರಡಿಸಿದರು.

ಬಳಿಕ ಸರ್ಕಾರಿ ನೌಕರರ ಸಂಘದ ಪದಾಕಾರಿಗಳ ಜೊತೆ ಸಂಘದ ಅಧ್ಯಕ್ಷ ಷಡಾಕ್ಷರಿ ಅವರು, ಕಬ್ಬನ್‍ಪಾರ್ಕ್ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಮುಷ್ಕರವನ್ನು ಕೈಬಿಡುವ ಒಮ್ಮತದ ತೀರ್ಮಾನಕ್ಕೆ ಬಂದರು.

ನಮಗೆ ಸರ್ಕಾರದ ಭರವಸೆ ಸಂಪೂರ್ಣವಾಗಿ ತೃಪ್ತಿ ತಂದಿಲ್ಲ. ಆದರೂ ಇರುವುದರಲ್ಲೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಬರುವ ದಿನಗಳಲ್ಲಿ ಸಂಘದ ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಶ್ವಾಸನೆ ನೀಡಿದ್ದಾರೆ.ಇದನ್ನು ಪ್ರತಿಷ್ಟೆಯಾಗಿ ತೆಗೆದುಕೊಳ್ಳದೆ ಮುಷ್ಕರವನ್ನು ನಾವು ಹಿಂಪಡೆಯಲು ತೀರ್ಮಾನಿಸಿದ್ದೇವೆ. ತತ್‍ಕ್ಷಣವೇ ಎಲ್ಲ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

ಮಧ್ಯಾಹ್ನದ ನಂತರ ಮುಷ್ಕರನಿರತ ನೌಕರರು ಕರ್ತವ್ಯಕ್ಕೆ ಹಾಜರಾದರು. ಇದಕ್ಕೂ ಮುನ್ನ ಮಧ್ಯಾಹ್ನದವರೆಗೆ ಸರ್ಕಾರದ ಬಹುತೇಕ ಕಚೇರಿಗಳು ಬಂದ್ ಆಗಿದ್ದವು. ರಾಜಧಾನಿ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ಕಲಬುರಗಿ, ಮಂಗಳೂರು, ಬೆಳಗಾವಿ ಸೇರಿದಂತೆ ಬಹುತೇಕ ಎಲ್ಲ ಕಡೆ ಮುಷ್ಕರಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದ್ದು, ಬಹುತೇಕ ಕಚೇರಿಗಳು ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಕ್ತಿಕೇಂದ್ರ ವಿಧಾನಸೌಧ, ವಿಕಾಸಸೌಧ, ಕೆಪಿಎಸ್‍ಸಿ ಕಚೇರಿ, ಜಿಲ್ಲಾಕಾರಿಗಳ ಕಚೇರಿ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜಗಳು, ತಾಲ್ಲೂಕು ಕಚೇರಿ, ಸರ್ಕಾರ ಹಾಸ್ಟೆಲ್‍ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಬೆಸ್ಕಾಂ, ಜಲಮಂಡಲಿ, ಗ್ರಾಮಪಂಚಾಯ್ತಿ, ಪುರಸಭೆ ಸೇರಿದಂತೆ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದರು.

ಮುಷ್ಕರದ ಪರಿಣಾಮ ಅನೇಕ ಕಡೆ ಸಾರ್ವಜನಿಕರು ಸರ್ಕಾರಿ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂದಿತು. ಆದರೆ ಸಾರಿಗೆ ಸೇವೆಗಳಲ್ಲಿ ಎಂದಿನಂತೆ ಬಸ್ ಸಂಚಾರ ಯಥಾಸ್ಥಿತಿಯಲ್ಲಿತ್ತು. ಮುಷ್ಕರಕ್ಕೆ ಕೆಎಸ್‍ಆರ್‍ಟಿಸಿ ಬಿಎಂಟಿಸಿ ಸೇರಿದಂತೆ ಎರಡು ನಿಗಮಗಳ ನೌಕರರು ಬೆಂಬಲ ಕೊಟ್ಟಿರಲಿಲ್ಲ.

ಬೆಂಗಳೂರಿನ ಕೆಸಿಜನರಲ್ ಆಸ್ಪತ್ರೆ, ವಿಕ್ಟೋರಿಯಾ, ವಾಣಿ ವಿಲಾಸ ಸೇರಿದಂತೆ ಜಿಲ್ಲಾಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಬಂದ್ ಆಗಿದ್ದವು.ಪರಿಣಾಮ ಬೆಳಗ್ಗಿನಿಂದಲೇ ಚಿಕಿತ್ಸೆಗೆ ಬಂದ ಸಾರ್ವಜನಿಕರು ವೈದ್ಯರಿಲ್ಲದ ಕಾರಣ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದರು. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳು ಬಂದ್ ಆದ ಹಿನ್ನಲೆಯಲ್ಲಿ ಸಾವಿರಾರು ರೋಗಿಗಳು ಚಿಕಿತ್ಸೆ ಸಿಗದೆ ಸರ್ಕಾರಕ್ಕೆ ಹಿಡಿಶಾಪ ಹಾಕಿದರು.

ಮುಷ್ಕರದ ಮಾಹಿತಿ ಇಲ್ಲದೆ ಬಂದಿದ್ದ ಗರ್ಭಿಣಿ ಮಹಿಳೆಯರಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಯತ್ತ ಕಣ್ಣೀರು ಹಾಕಿ ಹೊರಟರು. ಯಾವುದೇ ಓಪಿಡಿ ಸೇವೆಗಳೂ ಇರುವುದಿಲ್ಲ. ಮುಷ್ಕರದಲ್ಲಿ ಸರ್ಕಾರಿ ವೈದ್ಯರು, ನರ್ಸ್‍ಗಳು, ಲ್ಯಾಬ್ ಟೆಕ್ನಿಷಿಯನ್ಸ್, ಶಿಕ್ಷಣ ಇಲಾಖೆ ನೌಕರರು ಭಾಗಿದ್ದರು. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಉಂಟಾಗಿತ್ತು. ಎಲ್ಲ ಸರ್ಕಾರಿ ಶಿಕ್ಷಕರು ಮುಷ್ಕರದಲ್ಲಿ ಭಾಗಿಯಾಗುವ ಹಿನ್ನೆಲೆ ಶಾಲೆಗೆ ಗೈರಾಗಿದ್ದರು.

#GovernmentEmployees, #calledoff, #strike, #salaryincrease,

Articles You Might Like

Share This Article