ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ

Social Share

ಬೆಂಗಳೂರು,ಜ.14- ಬಹುದಿನಗಳ ಬೇಡಿಕೆಯಂತೆ ಮದ್ಯ ಖರೀದಿ ಮಾಡಲು ಪ್ರಸ್ತುತ ಜಾರಿಯಲ್ಲಿರುವ ಕಾನೂನುಬದ್ದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ಕಾಯ್ದೆಗೆ ತಿದ್ದುಪಡಿ ಮಾಡಿ ಮದ್ಯ ಖರೀದಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಸಡಿಲಿಕೆ ಮಾಡಲಿದೆ.

ಪ್ರಸ್ತುತ ಕರ್ನಾಟಕದಲ್ಲಿ ಮದ್ಯ ಖರೀದಿಸಲು 21 ವಯಸ್ಸನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ವಯಸ್ಸಿನ ಯುವಕರು/ಯುವತಿಯರು ಮದ್ಯ ಖರೀದಿ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೂ ಹೌದು.

ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್‌ಗೆ 10 ವರ್ಷಗಳ ಜೈಲು ಶಿಕ್ಷೆ..!

ಭಾರತದಲ್ಲಿ ಮತದಾನದ ವಯಸ್ಸನ್ನು 18ಕ್ಕೆ ನಿಗದಿಪಡಿಸಿರುವಾಗ ಮದ್ಯ ಖರೀದಿಗೂ ಇದೇ ನಿಯಮ ಜಾರಿಯಾಗಬೇಕೆಂಬುದು ಬಹುತೇಕರ ಒತ್ತಾಯವಾಗಿತ್ತು. ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯ ಖರೀದಿಗೆ ಗರಿಷ್ಠ 18 ವಯಸ್ಸನ್ನು ನಿಗದಿಪಡಿಸಿರುವಾಗ ನಮ್ಮ ರಾಜ್ಯದಲ್ಲೂ ಇದೇ ನಿಯಮ ಜಾರಿಯಾಗಲಿ ಎಂಬುದು ಮದ್ಯ ಮಾರಾಟಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.

ಹೀಗಾಗಿ ರಾಜ್ಯ ಸರ್ಕಾರ ನಿವೃತ್ತ ಅಕಾರಿ ಯಶ್ವಂತ್ ಎಂಬುವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಇದೀಗ ಸಮಿತಿಯು ಸರ್ಕಾರಕ್ಕೆ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದು ಅದರಲ್ಲಿ ಪ್ರಮುಖವಾಗಿ ಮದ್ಯ ಖರೀದಿಗೆ ನಿಗದಿಪಡಿಸಿರುವ ವಯೋಮಾನವನ್ನು ಬದಲಾವಣೆ ಮಾಡಲು ಸಲಹೆ ಮಾಡಿದ್ದಾರೆ.

ಇದರಂತೆ ಹಣಕಾಸು ಇಲಾಖೆಯು ಯಶ್ವಂತ್ ನೇತೃತ್ವದ ಸಮಿತಿಯ ಶಿಫಾರಸ್ಸುಗಳ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. 30 ದಿನಗಳಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿದೆ.

ದೇಶದಲ್ಲಿ ಮತದಾನದ ಅರ್ಹತೆ ಪಡೆಯುವ ವ್ಯಕ್ತಿಯ ವಯಸ್ಸು 18 ವರ್ಷಗಳು ಆಗಿರುವುದರಿಂದ, ಮದ್ಯ ಸೇವಿಸುವ ವಯಸ್ಸನ್ನು 18 ಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

ಉದ್ಯಮ ಸಂಸ್ಥೆಗಳು ಈ ಹಿಂದೆ ಹಲವಾರು ಬಾರಿ ಮದ್ಯ ಖರೀದಿ ವಯಸ್ಸನ್ನು 18ಕ್ಕೆ ಇಳಿಕೆ ಮಾಡುವಂತೆ ಪ್ರಸ್ತಾಪ ಮಾಡಿದ್ದವು. ಹಲವು ರಾಜ್ಯಗಳು ಈ ಹಿಂದೆ ಮದ್ಯದ ಖರೀದಿ ಮತ್ತು ಸೇವನೆಗೆ ಕಾನೂನುಬದ್ಧ ವಯಸ್ಸನ್ನು ಇಳಿಸಬೇಕೆಂದು ಒತ್ತಾಯಿಸಿದ್ದವು.

ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಪ್ರಸ್ತುತ ಶಾಸನವು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಾರ್‍ನಲ್ಲಿ ಮದ್ಯ ಸೇವಿಸುವುದನ್ನು ಸ್ಪಷ್ಟವಾಗಿ ನಿಷೇಸಿದ್ದರೂ, ಕಾನೂನನ್ನು ವಿರಳವಾಗಿ ಬಳಸಲಾಗಿದೆ ಎಂದು ಉದ್ಯಮಗಳು ಕೂಡ ಸಮರ್ಥಿಸಿಕೊಂಡಿದ್ದು, ಈಗ ವಯೋಮಿತಿ ಇಳಿಕೆಯನ್ನು ಸ್ವಾಗತಿಸಿದ್ದಾರೆ.

ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968, ಕರ್ನಾಟಕ ಅಬಕಾರಿ (ಬ್ರೂವರಿ) (ತಿದ್ದುಪಡಿ) ನಿಯಮಗಳು 2023, ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕಗಳು) ನಿಯಮಗಳು 1968 ಮತ್ತು ಕರ್ನಾಟಕಕ್ಕೆ ತಿದ್ದುಪಡಿಗಳನ್ನು ಸರ್ಕಾರ ಪ್ರಸ್ತಾಪಿಸಿದೆ.

ಅಬಕಾರಿ (ಪರವಾನಗಿಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967, ಕರ್ನಾಟಕ ಅಬಕಾರಿ ಕಾಯಿದೆ, 1965ರಡಿ ಪ್ರಸ್ತಾಪಿಸಲಾಗಿದೆ.
ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967, 2016ರಲ್ಲಿ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ಘಟಕಗಳನ್ನು ನಿಷೇಸುವ ಹಿಂದಿನ ಸುಪ್ರೀಂಕೋರ್ಟ್ ಆದೇಶಗಳ ಭಾಗವಾಗಿರುವ ನಿಬಂಧನೆಗಳನ್ನು ಸೇರಿಸಲು ತಿದ್ದುಪಡಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

5,000 ಜನಸಂಖ್ಯೆ ಮೀರಿದ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರದ ಸ್ಥಳಗಳಲ್ಲಿ ಹೆದ್ದಾರಿ ಅಂಚಿನಿಂದ 500 ಮೀಟರ್, ನಗರ ಪ್ರದೇಶಗಳು ಮತ್ತು 5,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಸ್ಥಳಗಳಲ್ಲಿ 220 ಮೀಟರ್‍ಗೆ ಮದ್ಯ ಮಾರಾಟವನ್ನು ನಿಷೇಸುವ ನ್ಯಾಯಾಲಯದ ಮಾರ್ಪಡಿಸಿದ ಆದೇಶವನ್ನು ಸಹ ಸೇರಿಸಲಾಗಿದೆ.

ಏತನ್ಮಧ್ಯೆ ರಾಜ್ಯ ಸರ್ಕಾರವು ಕರ್ನಾಟಕ ಅಬಕಾರಿ (ಬ್ರೂವರಿ) (ತಿದ್ದುಪಡಿ) ನಿಯಮಗಳು, 2023 ಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ, ಮೈಕ್ರೋಬ್ರೂವರಿಯಲ್ಲಿ ತಯಾರಿಸಿದ ಬಿಯರ್ ಉತ್ಪಾದನೆಯ ಮೇಲೆ ಅಬಕಾರಿ ಸುಂಕವನ್ನು ನಿಗದಿಪಡಿಸುತ್ತದೆ.

#StateGovernment, #Proposed, #Reduce, #AgeLimit, #BuyingLiquor, #from21to18, #Alcohol,

Articles You Might Like

Share This Article