ಬೆಂಗಳೂರು, ಫೆ,17- ಜ್ಯುವೆಲರಿ ಅಂಗಡಿಯ ಗೋಡೆ ಕೊರೆದು ಚಿನ್ನ-ಬೆಳ್ಳಿ ಸಾಮಾನು ಹಾಗೂ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಸೇರಿದಂತೆ ನೇಪಾಳ ಮೂಲದ ಆರು ಮಂದಿ ಸೆಕ್ಯೂರಿಟಿ ಗಾರ್ಡ್‍ಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿ 14 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಪ್ರಮುಖ ಆರೋಪಿ ಬೀರೇಂದರ್ ಸುನಾರ್ ಮತ್ತು ಗೋರ್ಖಾ ಸುನಾರ್, ಬಾಲ್ ಬಹದ್ದೂರ್ ವಿಶ್ವಕರ್ಮ ಅಲಿಯಾಸ್ ಬಾದಲ್, ಪುರನ್ ಸುನಾರ್, ರಮೇಶ್ ದಿವಾಲಿ, ಗೋವಿಂದ್‍ಕುಮಾರ್ ಬಂತ ಸೆಕ್ಯೂರಿಟಿ ಗಾರ್ಡ್‍ಗಳು. ಆರೋಪಿಗಳಿಂದ ನಗದು ಸೇರಿದಂತೆ 14 ಲಕ್ಷ ಮೌಲ್ಯದ 13 ಕೆಜಿ, 610 ಗ್ರಾಂ ತೂಕದ ಬೆಳ್ಳಿ ಸಾಮಾನು, 70 ಗ್ರಾಂ ತೂಕದ ಚಿನ್ನದ ಒಡವೆಗಳು, ಲ್ಯಾಪ್‍ಟಾಪ್ ವಶಪಡಿಸಿಕೊಳ್ಳುವಲ್ಲಿ ಪುಲಿಕೇಶಿನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳ ಪತ್ತೆಕಾರ್ಯ ಮುಂದು ವರೆದಿದೆ.
ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿರುವ ಕೋಲ್ಸ್ ರಸ್ತೆಯಲ್ಲಿ ಶ್ಲೋಕ್ ಜ್ಯುವೆಲರ್ಸ್ ಎಂಬ ಚಿನ್ನಾಭರಣದ ಅಂಗಡಿ ಇದೆ. ಈ ಅಂಗಡಿಯಲ್ಲಿ ಆರೋಪಿ ಬೀರೇಂದರ್ ಸುನಾರ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಈ ಅಂಗಡಿಯಲ್ಲಿ ಬೆಳ್ಳಿ ಸಾಮಾನು, ಚಿನ್ನದ ಆಭರಣಗಳನ್ನು ಕಳ್ಳತನ ಮಾಡಲು ಸಂಚು ರೂಪಿಸಿದ್ದಾನೆ.
ಅದರಂತೆ ಹೊಸಕೋಟೆ, ಕೆಆರ್ ಪುರಂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ತಮ್ಮ ಊರಿನವರೇ ಸೆಕ್ಯೂರಿಟಿ ಗಾರ್ಡ್ ಆಗಿರುವ ಐದು ಮಂದಿಯನ್ನು ಕರೆತಂದು ಜನವರಿ 27ರಂದು ಕಳ್ಳತನಕ್ಕೆ ಮುಂದಾಗಿದ್ದಾರೆ.
ಅಂದು ಚಿನ್ನಾಭರಣ ಅಂಗಡಿಯ ಗೋಡೆ ಕೊರೆದು ಆ ಮೂಲಕ ಒಳನುಗ್ಗಿ 14 ಲಕ್ಷ ಮೌಲ್ಯದ ಬೆಳ್ಳಿ ಸಾಮಾನುಗಳು, ಚಿನ್ನದ ಆಭರಣ ಹಾಗೂ 10 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಜ್ಯುವೆಲರಿ ಶಾಪ್ ಮಾಲೀಕರಾದ ನಿರ್ಮಲ್‍ಕುಮಾರ್ ದಲಾಲ್ ಅವರು ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದರು.
ಈ ಜ್ಯುವೆಲರಿ ಅಂಗಡಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಬಿರೇಂದರ್ ಎಂಬಾತ ತನ್ನ ಸ್ನೇಹಿತರೊಂದಿಗೆ ಸೇರಿ ಕಳ್ಳತನ ನಡೆಸಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆಮಾಡುವ ಸಲುವಾಗಿ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಭೀಮಾಶಂಕರ್ ಎಸ್.ಗುಳೇದ್ ಅವರ ಮಾರ್ಗದರ್ಶನದಲ್ಲಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ಅದರಂತೆ ಇನ್ಸ್‍ಪೆಕ್ಟರ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡ ಆರೋಪಿಗಳ ಪತ್ತೆಗಾಗಿ ಹಗಲಿರುಳು ಶ್ರಮ ವಹಿಸಿ ತಾಂತ್ರಿಕ ಮತ್ತು ಗ್ರೌಂಡ್‍ವರ್ಕ್‍ನ ತನಿಖೆ ಮೂಲಕ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಆರು ಮಂದಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
