ಐಷಾರಾಮಿ ಜೀವನಕ್ಕಾಗಿ ಕಳ್ಳತನ-ದರೋಡೆ ಮಾಡುತ್ತಿದ್ದ 9 ಮಂದಿ ಅರೆಸ್ಟ್

ಬೆಂಗಳೂರು, ನ.20- ಐಷಾರಾಮಿ ಜೀವನಕ್ಕಾಗಿ ವಾಹನ ಕಳ್ಳತನ, ದರೋಡೆ ಮತ್ತು ಕನ್ನಗಳವು ಮಾಡುತ್ತಿದ್ದ ಒಂಬತ್ತು ಆರೋಪಿಗಳನ್ನು ಈಶಾನ್ಯ ವಿಭಾಗದ ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತನಿಖೆಯಲ್ಲಿರುವ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಅಪರ ಪೊಲೀಸ್ ಆಯುಕ್ತರ ಸೂಚನೆಯಂತೆ ಯಲಹಂಕ ಉಪವಿಭಾಗದ ಎಸಿಪಿ ಮನೋಜ್‍ಕುಮಾರ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಸದರಿ ತನಿಖಾ ತಂಡವು ಯಲಹಂಕ ಉಪನಗರ ಪೊಲೀಸ್ ಠಾಣೆಯ ನಾಲ್ಕು ಪ್ರಕರಣಗಳಲ್ಲಿ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಸುಮಾರು 6 ಲಕ್ಷ ರೂ. ಬೆಲೆಬಾಳುವ ಸ್ಯಾಮ್‍ಸಂಗ್ ಮೊಬೈಲ್, ಕೆಟಿಎಂ ಕಂಪೆನಿಯ 2 ಐಷಾರಾಮಿ ಬೈಕ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ತನಿಖಾ ತಂಡವು ಯಶಸ್ವಿಯಾಗಿದೆ.