ಜೈಲಲ್ಲಿ ಸ್ನೇಹಿತರಾಗಿ ಹೊರಬಂದಮೇಲೆ ಕಳ್ಳತನ ಮಾಡುತ್ತಿದ್ದ ಆಸಾಮಿಗಳು ಅಂದರ್

Social Share

ಬೆಂಗಳೂರು, ಜ.11- ಕಾರಾಗೃಹದಲ್ಲಿದ್ದಾಗ ಸ್ನೇಹಿತರಾಗಿ ಹೊರಬಂದ ನಂತರ ಒಟ್ಟಾಗಿ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ 16.65 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತಃ ಆಂಧ್ರಪ್ರದೇಶದ ವೆಂಕಟರಮಣ, ಕೃಷ್ಣಮೂರ್ತಿ ಹಾಗೂ ಬಾಗೇಪಲ್ಲಿ ಮೂಲದ ರಮೇಶ ಬಂಧಿತರು.
ಅ.11 ರಂದು ಪಿರ್ಯಾದುದಾರರು ಸ್ನಾನಕ್ಕೆ ಹೋಗುವ ಮುನ್ನ ಬಿಚ್ಚಿಟ್ಟಿದ್ದ ಚಿನ್ನದ ಸರ ಕಳ್ಳತನವಾಗಿದ್ದ ಬಗ್ಗೆ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.  ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಸರ ಕಳವು ಮಾಡಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಇನ್ಸ್‍ಪೆಕ್ಟರ್ ಶ್ರೀನಿವಾಸ್ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮನೆಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಮೂವರು ವಿವಿಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದ ಸಂದರ್ಭದಲ್ಲಿ ಪರಿಚಯವಾಗಿ ಸ್ನೇಹಿತರಾಗಿದ್ದಾರೆ.
ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ನಂತರ ಒಟ್ಟಾಗಿ ಸೇರಿಕೊಂಡು ಬೈಕ್‍ನಲ್ಲಿ ವಿವಿಧ ಬಡಾವಣೆಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡಲು ಸಂಚು ರೂಪಿಸುತ್ತಿದ್ದರು. ಇಬ್ಬರು ಮನೆ ಬೀಗ ಒಡೆದು ಕಳ್ಳತನ ಮಾಡುತ್ತಿದ್ದರೆ ಒಬ್ಬಾತ ಹೊರಗೆ ನಿಂತುಕೊಂಡು ಯಾರಾದರೂ ಬಂದರೆ ಅವರಿಗೆ ಸುಳಿವು ನೀಡುತ್ತಿದ್ದನು.
ಇದೇ ರೀತಿ ಮನೆಗಳ್ಳತನ ನಡೆಸುತ್ತಿದ್ದರು. ಚಾಲಕಿ ಈ ಕಳ್ಳರು ಚಿನ್ನದ ಆಭರಣ ಮತ್ತು ಹಣ ಮಾತ್ರ ದೋಚಿ ಪರಾರಿಯಾಗುತ್ತಿದ್ದರು. ಬೆಳ್ಳಿ ಸಾಮಾನು, ಇತರೆ ವಸ್ತುಗಳನ್ನು ಮುಟ್ಟುತ್ತಿರಲಿಲ್ಲ. ಆರೋಪಿಗಳ ಬಂಧನದಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯ 4 ಮನೆಗಳವು ಪ್ರಕರಣ, ವಿಜಯನಗರ ಠಾಣೆಯ 2 ಪ್ರಕರಣ ಕೆಪಿ ಅಗ್ರಹಾರ ಹಾಗೂ ಚನ್ನಪಟ್ಟಣ ಗ್ರಾಮಾಂತರ ಠಾಣೆಯ ತಲಾ ಒಂದು ಮನೆಗಳ್ಳತನ ಸೇರಿದಂತೆ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಆರೋಪಿಗಳು ಇನ್ನು ಮನೆಗಳ್ಳತನ ಮಾಡಿರುವ ಶಂಕೆಯಿದ್ದು ತನಿಖೆ ಮುಂದುವರೆದಿದೆ.

Articles You Might Like

Share This Article