ಜೈಪುರ,ಅ.10- ವೃದ್ಧೆಯೊಬ್ಬರು ಧರಿಸಿದ್ದ ಬೆಳ್ಳಿಯ ಕಾಲುಂಗುರಗಳನ್ನು ಕದಿಯಲು ಕಳ್ಳರು ಆಕೆಯ ಪಾದಗಳನ್ನೇ ಕತ್ತರಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ನೂರು ವರ್ಷದ ಜಮುನಾ ದೇವಿ ಪಾದ ಕಳೆದು ಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಜಾನೆ ಈ ಘಟನೆ ನಡೆದಿದ್ದು, ಆ ವೇಳೆ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಈ ಸಮಯಕ್ಕಾಗಿ ಹೊಂಚು ಹಾಕಿದ್ದ ಕಳ್ಳರು ವೃದ್ದೆಯನ್ನು ಮನೆಯಿಂದ ಹೊರಕ್ಕೆ ಎಳೆದೊಯ್ದು ಹರಿತವಾದ ಆಯುಧದಿಂದ ಪಾದಗಳನ್ನೇ ಕತ್ತರಿಸಿ ಕಾಲುಂಗುರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ನಿದ್ರೆಯಿಂದ ಎಚ್ಚೆತ್ತ ಮಗಳು ಮತ್ತು ಮೊಮ್ಮಗಳು ಮನೆಯಿಂದ ಹೊರಗೆ ಬಂದಾಗ ಅಜ್ಜಿ ತೀವ್ರ ರಕ್ತಸ್ರಾವ ದಿಂದ ನರಳುತಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮಹಿಳೆಯ ಕಾಲು ಕತ್ತರಿಸಲು ಬಳಸಿದ್ದ ಆಯುಧ ಸ್ಥಳದಲ್ಲೇ ಪತ್ತೆಯಾಗಿದ್ದು, ಫೋರೆನ್ಸಿಕ್ ತಜ್ಞರ ಸಹಾಯದಿಂದ ಪೊಲೀಸರು ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಕಳ್ಳರ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.