ಚಂಡೀಗಢ,ಫೆ.5- ದೂರದ ಪಂಜಾಬಿನಲ್ಲಿ ಕನ್ನಡಿಗರೊಬ್ಬರು ಸದ್ದು ಮಾಡುತ್ತಿದ್ದಾರೆ. ಕರ್ನಾಟಕದ ಬಿಜಾಪುರ ಜಿಲ್ಲೆಯ ಪಂಡಿತ್ ರಾವ್ ಧರೆನ್ನವರ್ ಎಂಬ ಪ್ರಾಧ್ಯಾಪಕರು ಪಂಜಾಬ್‍ನಲ್ಲಿ ಪಂಜಾಬಿ ಭಾಷೆ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕುವಂತೆ ವ್ಯಾಪಾರಸ್ಥರಿಗೆ ತಾಕೀತು ಮಾಡುತ್ತಿದ್ದಾರೆ.
2003ರಲ್ಲಿ ಪ್ರಾಧ್ಯಾಪಕ ಹುದ್ದೆ ಅಲಂಕರಿಸಲು ಚಂಡೀಗಢಕ್ಕೆ ಬಂದು ನೆಲೆಸಿರುವ ಅವರು ಅಲ್ಲಿನ ಸೆಕ್ಟರ್ 46ರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಪಂಜಾಬಿ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವ ಮೂಲಕ ಮನೆ ಮಾತಾಗಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಳೆದ ನವೆಂಬರ್‍ನಲ್ಲಿ ಮಾತೃಭಾಷೆಯ ಗೌರವದ ಸಂಕೇತವಾಗಿ ರಾಜ್ಯದಲ್ಲಿರುವ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೆ ಇತರ ಭಾಷೆಗಳ ಜತೆಗೆ ಪಂಜಾಬಿ ಭಾಷಾ ಫಲಕಗಳನ್ನು ಅಳವಡಿಸಬೇಕು ಎನ್ನುವ ಸಾಮೂಹಿಕ ಆಂದೋಲನಕ್ಕೆ ಕರೆ ನೀಡಿದ್ದರು.
ಇದರಿಂದ ಪ್ರಭಾವಿತರಾಗಿರುವ ಧರೆನ್ನವರ್ ಅವರು, ತಮ್ಮ ಮಾತೃ ಭಾಷೆಗೆ ಗೌರವ ಕೊಡಬೇಕು ಮತ್ತು ಯಾವುದೇ ಭಾಷೆಗಿಂತ ಮೊದಲು ತಮ್ಮ ಅಂಗಡಿಗಳ ಮೇಲೆ ಪಂಜಾಬಿ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ.
ತಮ್ಮ ಅಂಗಡಿಗಳ ಮೇಲೆ ಮಾತೃಭಾಷೆಯನ್ನು ರಾರಾಜಿಸುವಂತೆ ಮಾಡುವುದು ಎಲ್ಲ ಪಂಜಾಬಿಗರ ಹೆಮ್ಮೆ ಹೀಗಾಗಿ ಎಲ್ಲರೂ ಮಾತೃಭಾಷೆಗೆ ಆಧ್ಯತೆ ನೀಡಲು ಪ್ರತಿಜ್ಞೆ ಮಾಡಬೇಕು ಎಂದು ಧರೆನ್ನವರ್ ಆಗ್ರಹಿಸುತ್ತಿದ್ದಾರೆ.
ಈ ಹೋರಾಟಕ್ಕಾಗಿ ಅವರು ಖನ್ನಾ, ಲುಯಾನ, ಮೊಗಾ, ಪಟಿಯಾಲ, ರಾಜ್‍ಪುರ, ಮೊಹಾಲಿ ಮತ್ತು ಫತೇಘರ್ ಸಾಹಿಬ್‍ಗೆ ಭೇಟಿ ನೀಡಿದ್ದೇನೆ ಮತ್ತು ಗುರುದಾಸ್‍ಪುರ, ಪಠಾಣ್‍ಕೋಟ, ಫಿರೋಜ್‍ಪುರ ಮತ್ತು ಇತರ ನಗರಗಳಿಗೆ ಭೇಟಿ ನೀಡಿ ಅಲ್ಲೂ ಮಾತೃಭಾಷೆ ಪ್ರೇಮಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
ದೆಹಲಿ ಅಂಗಳ ತಲುಪುತ್ತಿರುವ ಕಾಂಗ್ರೆಸ್‍ನ ಒಳ ಬೇಗುದಿಗಳು
ಇದರ ಜತೆಗೆ ಪಂಜಾಬಿನ ಖಾಸಗಿ ವಿಶ್ವ ವಿದ್ಯಾನಿಲಯಗಳಿಗೆ ಪತ್ರ ಬರೆದು ಎಲ್ಲ ವಿವಿಗಳ ಮೇಲೆ ಪಂಜಾಬಿ ನಾಮಫಲಕಗಳನ್ನು ಹಾಕುವಂತೆ ಒತ್ತಾಯಿಸಿದ್ದಾರೆ.
ಈ ಹಿಂದೆ ಪಂಜಾಬಿ ಹಾಡುಗಳಲ್ಲಿ ಬಂದೂಕು ಸಂಸ್ಕøತಿ, ಡ್ರಗ್ಸ್ , ಮದ್ಯ ಮತ್ತು ಹಿಂಸಾಚಾರಗಳನ್ನು ವೈಭವಿಕರಿಸುವುದರ ವಿರುದ್ಧ ಧ್ವನಿ ಎತ್ತಿದ್ದ ಕನ್ನಡಿಗ ಧರೆನ್ನವರ್ ಇದೀಗ ಪಂಜಾಬಿ ಭಾಷಾ ಪ್ರೇಮಕ್ಕಾಗಿ ಹೋರಾಟ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಹೊಟ್ಟೆಪಾಡಿಗಾಗಿ ದೂರದ ಕರ್ನಾಟಕದಿಂದ ಬಂದು ಇಲ್ಲೆ ನೆಲೆಸಿ ಪಂಜಾಬಿನ ಮಾತೃ ಭಾಷೆಗಾಗಿ ಹೋರಾಟ ನಡೆಸುತ್ತಿರುವ ಧರೆನ್ನವರ್ ಅವರ ಕ್ರಮಕ್ಕೆ ಪಂಜಾಬಿ ಫೀದಾ ಆಗಿದ್ದಾರಂತೆ.